ಚಿಕ್ಕಬಳ್ಳಾಪುರ: ನಗರದ ಹೊರವಲಯದ ತಿಪ್ಪೇನಹಳ್ಳಿ ಗ್ರಾಮದ ಗಿರೀಶ್ ಎನ್ನುವ ಯುವರೈತ, ಪದವಿ ಮುಗಿಸಿ 15 ರಿಂದ 20 ಸಾವಿರ ಸಂಬಳಕ್ಕೆ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಆತನಿಗೆ ಬರುತ್ತಿದ್ದ ಸಂಬಳ ಸಾಕಾಗುತ್ತಿಲ್ಲವೆಂದು ಕೆಲಸ ತೊರೆದು ತಂದೆಯ ಜೊತೆ ಕೃಷಿ, ತೋಟಗಾರಿಕೆಯತ್ತ ವಾಲಿದ್ದು, ಈ ಬಾರಿ ಬೀನ್ಸ್ ಬೆಳೆದು ಲಕ್ಷಾಧಿಪತಿ ಅಗಿದ್ದಾನೆ. ಈಗ ಬೀನ್ಸ್ಗೆ ಬಂಗಾರದ ಬೆಲೆ ಇದೆ. ಕೆಜಿ ಬೀನ್ಸ್ 170 ರಿಂದ 200 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.
ಗಿರೀಶ್ ತಂದೆ ಹೆಸರಿನಲ್ಲಿ 8 ಎಕರೆ ಜಮೀನಿದೆ. ಅದರಲ್ಲಿ ಗಿರೀಶ್ 2 ಎಕರೆ ರೋಜಾಹೂವು ಬೆಳೆದಿದ್ದಾನೆ. ಭರಪೂರ ಆದಾಯ ಬರುತ್ತಿದೆ. ಇನ್ನು ತುಂಬಾ ಬಿಸಿಲು ಎಂದು ಈ ಬಾರಿ ರೈತರು ಬೀನ್ಸ್ ಬೆಳೆಯಲು ಹೋಗಿಲ್ಲ. ಆದರೂ ಛಲಬಿಡದ ಗಿರೀಶ್, ಬೋರ್ವೇಲ್ಗೆ ಜನರೇಟರ್ ಅಳವಡಿಸಿ ಹಗಲು-ರಾತ್ರಿ ಬೀನ್ಸ್ ತೋಟ ಸಾಕುತ್ತಿದ್ದಾನೆ. ಇದರಿಂದ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಗಿರೀಶ್ ಬೆಳೆದ ಬೀನ್ಸ್ದೇ ಹವಾ ಹೆಚ್ಚಾಗಿದೆ.
ಬೀನ್ಸ್ ಸೇರಿದಂತೆ ತರಹೆವಾರಿ ತರಕಾರಿಗೆ ಹೆಸರುವಾಸಿಯಾಗಿರುವ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಈಗ ಬೀನ್ಸ್ನ್ನು ದುರ್ಬಿನ್ ಹಾಕಿ ಹುಡುಕುವಂತಾಗಿದೆ. ಪ್ರತಿವರ್ಷ ಈ ಸಂದರ್ಭದಲ್ಲಿ ಟನ್‍ಗಟ್ಟಲೇ ಬೀನ್ಸ್ ಮಾರುಕಟ್ಟೆಗೆ ಬರುತ್ತಿತ್ತು. ಈ ಬಾರಿ ಬೆರಳಣಿಕೆಯಷ್ಟು ಬೀನ್ಸ್ ಮೂಟೆಗಳು ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಬೀನ್ಸ್ಗೆ ಬಂಗಾರದ ಬೆಲೆ ಬಂದಿದೆ.
ವಿಪರೀತ ತಾಪಮಾನದಿಂದ ಫಸಲು ಬರದೇ ಮೊಳಕೆಯಲ್ಲೇ ಬೀನ್ಸ್ ಕಮರಿತ್ತು. ಆದರೂ ಛಲಬಿಡದ ಗಿರೀಶ್, ಹಗಲು-ರಾತ್ರಿ ಕಷ್ಟಪಟ್ಟು 2 ಎಕರೆ ಜಮೀನಿನಲ್ಲಿ ಬೀನ್ಸ್ ಬೆಳೆದಿದ್ದಾನೆ. ಜೊತೆಗೆ ಈಗಾಗಲೇ 4 ರಿಂದ 5 ಸಲ ಕಟಾವು ಮಾಡಿದ್ದು, 10 ಟನ್‍ಗೂ ಹೆಚ್ಚು ಬೀನ್ಸ್ ಬಂದಿದೆ. ಕೆಜಿ ಬೀನ್ಸ್ಗೆ ಸರಾಸರಿ 180 ರೂಪಾಯಿ ಮಾರಾಟವಾಗಿದೆ. ಇದರಿಂದ ಕೇವಲ 2 ತಿಂಗಳಿನಲ್ಲಿ 17 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.