ಡಿಸಿಸಿ ಗುದ್ದಾಟ:ಫಲಿತಾಂಶಕ್ಕೆ ಕಾಯಬೇಕಾದ ಅನಿವಾರ್ಯತೆ
ನಿಮ್ಮ ಸುದ್ದಿ ಬಾಗಲಕೋಟೆ
ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದರೂ ಫಲಿತಾಂಶಕ್ಕಾಗಿ ಮತ್ತೊಂದು ವಾರ ಕಾಯಬೇಕಾದ ಅನಿವಾರ್ಯತೆ ಸದ್ಯಕ್ಕೆ ಎದುರಾಗಿದೆ.
ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಮಧ್ಯೆ ರಾಜಕೀಯ ಸಂಘರ್ಷಕ್ಕೆ ಕಾರಣವಾದ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದರೂ ಅದರ ಫಲಿತಾಂಶಕ್ಕೆ ಮಾತ್ರ ಕೋರ್ಟ್ ತೀರ್ಪಿನವರೆಗೂ ಕಾಯಬೇಕಾದ ಅನಿವಾರ್ಯತೆ ಬಂದೊದಗಿದೆ.
ಇತ್ತೀಚೆಗೆ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ೧೩ ಸ್ಥಾನಗಳಲ್ಲಿ ೬ ಕಾಂಗ್ರೆಸ್, ೫ ಬಿಜೆಪಿ ಬೆಂಬಲಿತ ಹಾಗೂ ಇಬ್ಬರು ಪಕ್ಷೇತರರಾಗಿ ಆಯ್ಕೆ ಆಗಿದ್ದರು. ಹೇಗಾದರೂ ಮಾಡಿ ಈ ಬಾರಿ ಬಿಡಿಸಿಸಿ ಗದ್ದುಗೆ ತನ್ನತ್ತ ಸೆಳೆಯಬೇಕೆಂಬ ಉದ್ದೇಶದಿಂದ ಬಿಜೆಪಿ ಸರಕಾರ ಇಬ್ಬರನ್ನು ನಾಮನಿರ್ದೇಶನಗೊಳಿಸಿ ಆದೇಶಿಸಿತ್ತು. ಇದರಲ್ಲಿ ಒಬ್ಬರ ನಾಮನಿರ್ದೇಶನವನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ ಮೊರೆ ಹೋಗಿತ್ತು.
ಈ ಮಧ್ಯೆ ನಿಗದಿಯಂತೆ ನವಂಬರ್ ೧೭ರಂದು ಚುನಾವಣೆಗೆ ದಿನಾಂಕ ಘೋಷಿಸಲಾಗಿತ್ತು. ಕಾಂಗ್ರೆಸ್‌ನ ತಕರಾರು ಸ್ವೀಕರಿಸಿದ ಕೋರ್ಟ್ ವಿಚಾರಣೆಯನ್ನು ನ.೧೮ಕ್ಕೆ ಮುಂದೂಡಿತ್ತು. ಹೀಗಾಗಿ ನ.೧೭ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೂ ಫಲಿತಾಂಶ ಘೋಷಿಸಿರಲಿಲ್ಲ. ನ.೧೮ರ ತೀರ್ಪಿನ ನಂತರ ಫಲಿತಾಂಶ ಘೋಷಿಸಲಾಗುತ್ತದೆ ಎಂಬ ಮಾತು ಕೇಳಿತ್ತು.
ಆದರೆ ಬುಧವಾರ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ವಿಚಾರಣೆಯನ್ನು ನವಂಬರ್ ೨೫ಕ್ಕೆ ಮುಂದೂಡಿತು. ಹೀಗಾಗಿ ಫಲಿತಾಂಶ ಘೋಷಣೆಗೆ ಮತ್ತೊಂದು ವಾರ ಕಾಯುವ ಅನಿವಾರ್ಯತೆ ಬಂದೊದಗಿದೆ. ಆದರೆ ಈ ವಿಚಾರಣೆ ಅಂದೆ ಮುಗಿಯುತ್ತದೆಯೋ ಅಥವಾ ಮುಂದೂಡಲಾಗುತ್ತಿದೆಯೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ನವಂಬರ್ ೧೭ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಕುಮಾರಗೌಡ ಜನಾಲಿ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ ತಪಶೆಟ್ಟಿ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಅಜಯಕುಮಾರ ಸರನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಮುರುಗೇಶ ಕಡ್ಲಿಮಟ್ಟಿ ನಾಮಪತ್ರ ಸಲ್ಲಿಸಿದ್ದರು. ಈ ಮಧ್ಯೆ ಅಧ್ಯಕ್ಷ ಸ್ಥಾನದ ಮತ್ತೋರ್ವ ಆಕಾಂಕ್ಷಿ ಹುನಗುಂದ ಪಿಕೆಪಿಎಸ್ ಕ್ಷೇತ್ರದ ವಿಜಯಾನಂದ ಕಾಶಪ್ಪನವರ ನಾಮಪತ್ರ ಸಲ್ಲಿಸಿದ್ದು ಕಾಂಗ್ರೆಸ್‌ಗೆ ಬಿಸಿತುಪ್ಪವಾಗಿ ಪರಿಣಮಿಸಿತು. ಆದರೆ ಕಾಶಪ್ಪನವರ ನಾಮಪತ್ರಕ್ಕೆ ಸೂಚಕರು, ಅನುಮೋದಕರು ಇಲ್ಲದ ಕಾರಣ ನಾಮಪತ್ರ ತಿರಸ್ಕೃತಗೊಂಡಿತು.
ಇದರಿಂದ ಅಸಮಾಧಾನಗೊಂಡ ಕಾಶಪ್ಪನವರ, ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದರು. ಹೀಗಾಗಿ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ತಲಾ ೬ ನಿರ್ದೇಶಕರು, ಇಬ್ಬರು ನಾಮನಿರ್ದೇಶಿತ ಸದಸ್ಯರು ಹಾಗೂ ಓರ್ವ ಸಹಕಾರ ಸಂಘದ ಉಪನಿಬಂಧಕರು ಸೇರಿ ೧೫ ಜನ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.