This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

 ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು

ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು

ಜಾನಪದಗಳು, ರಾಜ್ಯ ಸಾಮ್ರಾಜ್ಯಗಳು,
ಗುರುಸ್ಥಾನಗಳು, ಧರ್ಮಗಳು, ಭಾಷೆ ವಿದ್ಯೆಗಳು,
ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ
ಮಾನವತೆ ನಿಂತಿಹುದು ಮಂಕುತಿಮ್ಮ
– ಡಿ.ವಿ.ಜಿ.
ಅಂತಹ ಮಾನವೀಯ ಆರ್ದ್ರತೆಯ ನಮ್ಮ ಆಡಳಿತದ ಜೀವದ್ರವ್ಯ.
390. ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹಲವು ಸಕಾರಾತ್ಮಕ ಬೆಳವಣಿಗೆಗಳನ್ನು ನಾವು ಕಂಡಿದ್ದೇವೆ. ರಾಜ್ಯದ ತಲಾ ಆದಾಯ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2.04 ಲಕ್ಷ ರೂ. ಗಳಿಂದ 3.32 ಲಕ್ಷ ರೂ. ಗಳಿಗೆ ಹೆಚ್ಚಿದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ದೇಶದ ಸರಾಸರಿಗಿಂತ ಕಡಿಮೆಯಾಗಿದ್ದು, ಅಭಿವೃದ್ಧಿಯ ಬೆಳವಣಿಗೆ ದರ ಹೆಚ್ಚಾಗಿದೆ. ಶಿಶು ಮರಣ ದರ ಹಾಗೂ ತಾಯಿ ಮರಣ ದರ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇದಲ್ಲದೆ ರಾಜ್ಯದಲ್ಲಿ ಪ್ರವಾಹ, ಬೆಳೆನಷ್ಟ, ಮಾನವ-ವನ್ಯಪ್ರಾಣಿ ಸಂಘರ್ಷ, ಜಾನುವಾರುಗಳಿಗೆ ಸಾಂಕ್ರಾಮಿಕದಂತಹ ಸಂಕಷ್ಟಗಳು ತಲೆದೋರಿದಾಗಲೆಲ್ಲ ನಮ್ಮ ಸರ್ಕಾರ ಜನರ ನೆರವಿಗೆ ಧಾವಿಸಿದೆ. ಸಕಾಲದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಡಯಾಲಿಸಿಸ್ ಸೈಕಲ್ ಹೆಚ್ಚಳ, ಕಾಕ್ಲಿಯರ್ ಇಂಪ್ಲಾಂಟ್, ಆಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ನೆರವಿನಂತಹ ಸೂಕ್ಷ್ಮ ಕ್ರಮಗಳನ್ನು ಕೈಗೊಂಡಿದ್ದೇವೆ. ಆ ಮೂಲಕ ಸ್ಪಂದನಾಶೀಲ
ಹಾಗೂ ಸಂವೇದನಾಶೀಲ ಸರ್ಕಾರವಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ತಂತ್ರಜ್ಞಾನದ ಸದ್ಬಳಕೆಯೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ Ease of Living ಆಶಯವನ್ನು ಸಾಕಾರಗೊಳಿಸಲು ನಮ್ಮ ಸರ್ಕಾರ ಒತ್ತು ನೀಡುತ್ತಿದೆ.
391. ರಾಜ್ಯದ ಆಡಳಿತ ವ್ಯವಸ್ಥೆಯನ್ನು ಬಲಪಡಿಸಿ, ನಾಗರಿಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಲು ಹಾಗೂ ಯುವ ಜನತೆಗೆ ಹೆಚ್ಚಿನ ಉದ್ಯೋಗವಕಾಶವನ್ನು ಒದಗಿಸಲು ನಮ್ಮ ಸರ್ಕಾರವು ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದೆ. ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನಮ್ಮ ಸರ್ಕಾರವು ನಿರ್ಧರಿಸಿದೆ.
ಈ ಎಲ್ಲಾ ಹುದ್ದೆಗಳ ಆಯ್ಕೆ ಪ್ರಕ್ರಿಯೆಯನ್ನು 2023-24ನೇ ಸಾಲಿನಲ್ಲಿಯೇ ಪೂರ್ಣಗೊಳಿಸಿ ನೇಮಕಾತಿ ಆದೇಶವನ್ನು ನೀಡಲಾಗುವುದು.
392. ಇದೇ ರೀತಿ ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಗುವುದು.
393. ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಸರ್ಕಾರಕ್ಕೆ ಒಟ್ಟು
5 ವರದಿಗಳನ್ನು ಸಲ್ಲಿಸಿದ್ದು, ಇದರಲ್ಲಿ 3,630 ಇಲಾಖಾವಾರು ಶಿಫಾರಸ್ಸುಗಳು ಒಳಗೊಂಡಿವೆ. ಆಯೋಗದ ಶಿಫಾರಸುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಆಡಳಿತದಲ್ಲಿ ದಕ್ಷತೆ ಹಾಗೂ ಪಾರದರ್ಶಕತೆ ತರುವ ಮೂಲಕ ಮನೆ ಬಾಗಿಲಿಗೇ ಸರ್ಕಾರ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದೇವೆ.
394. ರಾಜ್ಯ ಸರ್ಕಾರವು 1,475 ತಾಂಡ, ಗೊಲ್ಲರಹಟ್ಟಿ, ಕುರುಬರಹಟ್ಟಿ ಮತ್ತು ಇತರೆ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದೆ. ಈ ಪೈಕಿ ಕಲಬುರಗಿ, ರಾಯಚೂರು, ವಿಜಯನಗರ, ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ
342 ದಾಖಲೆರಹಿತ ಜನವಸತಿಗಳ 52,000 ಫಲಾನುಭವಿಗಳಿಗೆ
ಮಾನ್ಯ ಪ್ರಧಾನ ಮಂತ್ರಿಗಳ ಮೂಲಕ ಹಕ್ಕು ಪತ್ರಗಳನ್ನು ವಿತರಿಸಿ ದಾಖಲೆ ನಿರ್ಮಿಸಿದ್ದೇವೆ.
395. ಸರ್ಕಾರಿ ಜಮೀನನ್ನು ದಶಕಗಳಿಂದ ಒತ್ತುವರಿ ಮಾಡಿಕೊಂಡು ಕಾಫಿ, ಟೀ, ಮತ್ತು ಇನ್ನಿತರೆ ಪ್ಲಾಂಟೇಶನ್‌ ಬೆಳೆಗಳನ್ನು ಬೆಳೆಯುತ್ತಿರುವ ಜಮೀನುಗಳನ್ನು 30 ವರ್ಷಗಳ ಅವಧಿಗೆ ಗರಿಷ್ಠ 25 ಎಕರೆ ಮಿತಿಗೆ ಒಳಪಟ್ಟು ಗುತ್ತಿಗೆ ನೀಡಲು ಕರ್ನಾಟಕ
ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, 2023-24ನೇ ಸಾಲಿನಲ್ಲಿ ಈ ಕಾಯ್ದೆ ಜಾರಿಗೊಳಿಸಲು ನಿಯಮಗಳನ್ನು ರೂಪಿಸಲಾಗುವುದು. ಇದೇ ರೀತಿ ಸಮಸ್ಯೆಗಳಿರುವ ಮತ್ತಿತರೆ ಪ್ರಕರಣಗಳನ್ನೂ ಸಹ ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗುವುದು.
396. ವಿವಿಧ ನಾಗರಿಕ ಸೇವೆಗಳನ್ನು ಜನರಿಗೆ ಸ್ಥಳೀಯವಾಗಿ ದೊರಕಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಿದೆ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನೀಡಲಾಗುತ್ತಿದ್ದ ಹಲವು ಸೇವೆಗಳನ್ನು ನಾಡ ಕಛೇರಿ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ನೀಡುವ ಮೂಲಕ ಜನರ ಮನೆ ಬಾಗಿಲಿಗೇ ಆಡಳಿತವನ್ನು ತಲುಪಿಸುವಲ್ಲಿ ಮಹತ್ತರ ಹೆಜ್ಜೆಗಳನ್ನಿಟ್ಟಿದ್ದೇವೆ. ಈಗಾಗಲೇ
ಈ ವರ್ಷದಲ್ಲಿ ಗ್ರಾಮ ಒನ್‌ ಕೇಂದ್ರ ಹಾಗೂ ನಾಡಕಛೇರಿಗಳ ಮೂಲಕ 1.5 ಕೋಟಿ ಅರ್ಜಿಗಳನ್ನು ವಿಲೇ ಮಾಡಲಾಗಿದೆ.
397. ʻಹಲೋ ಕಂದಾಯ ಸಚಿವರೇʼ ಸಹಾಯವಾಣಿ ಯೋಜನೆಯಡಿ ಒಂದು ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 79,951 ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ನೀಡಲಾಗಿದೆ.
398. ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡುವ ಕುರಿತು ಒಂದು ನೀತಿಯನ್ನು ರೂಪಿಸುವ ಸಲುವಾಗಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದ್ದು, ಅದರ ಶಿಫಾರಸ್ಸಿನನ್ವಯ ಕ್ರಮ ಕೈಗೊಳ್ಳಲಾಗುವುದು.
399. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೇರು ಕೃಷಿ ಉದ್ದೇಶಕ್ಕಾಗಿ ಗುತ್ತಿಗೆಗೆ ನೀಡಲಾಗಿರುವ ಸುಮಾರು 4,292 ಎಕರೆ ಜಮೀನನ್ನು ಮಾರ್ಗಸೂಚಿ ಮೌಲ್ಯವನ್ನು ವಿಧಿಸಿ ಖಾಯಂ ಆಗಿ ಮಂಜೂರು ಮಾಡಲು ಕರ್ನಾಟಕ ʻಭೂ ಮಂಜೂರಾತಿ ನಿಯಮಗಳು 1969ʼ ಗೆ ತಿದ್ದುಪಡಿ ತರಲು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ.
400. ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮಗೊಳಿಸಲು ನಮೂನೆ-57 ರಲ್ಲಿ ಅರ್ಜಿ ಸಲ್ಲಿಸಲು ದಿನಾಂಕ: 30.05.2022 ರಿಂದ ಒಂದು ವರ್ಷದ ಅವಧಿಯವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
401. ರೈತರಿಗೆ ತುರ್ತಾಗಿ ಭೂಮಾಪನಾ ನಕ್ಷೆ ಬೇಕಾಗಿದ್ದಲ್ಲಿ ʻಸ್ವಾವಲಂಬಿʼ ಯೋಜನೆಯಡಿ ಸ್ವತಃ ನಕ್ಷೆ ತಯಾರಿಸಲು ಅವಕಾಶ ಕಲ್ಪಿಸಲಾಗಿದ್ದು, 5 ಸಾವಿರಕ್ಕಿಂತ ಹೆಚ್ಚು ಜನ ಈಗಾಗಲೇ ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಪೋಡಿ ಮುಕ್ತ ಅಭಿಯಾನ ಯೋಜನೆಯನ್ನು ಗಣಕೀಕೃತಗೊಳಿಸಿ ಮೋಜಣಿ ಗಣಕ ವ್ಯವಸ್ಥೆಯಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಸಾಲಿನಲ್ಲಿ 3,000 ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಲಾಗುವುದು.
402. ಗ್ರಾಮ ಸಹಾಯಕರ ಹುದ್ದೆಯನ್ನು ‘ಜನಸೇವಕ’ ಎಂದು ಮರುನಾಮಕರಣ ಮಾಡಿ ಸರ್ಕಾರದ ವತಿಯಿಂದ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಸರಿಯಾಗಿ ಜನರಿಗೆ ತಲುಪುತ್ತಿದೆಯೇ ಎಂದು ಖಾತರಿ ಪಡಿಸುವ ಜವಾಬ್ದಾರಿಯನ್ನು ನೀಡಲಾಗುವುದು. ಇವರಿಗೆ ನೀಡುತ್ತಿರುವ ಮಾಸಿಕ ಗೌರವಧನವನ್ನು 13,000 ರೂ. ಗಳಿಂದ 14,000 ರೂ. ಗಳಿಗೆ ಹೆಚ್ಚಿಸಲಾಗುವುದು.
403. ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ 2022-23ನೇ ಸಾಲಿಗೆ ದೇವಸ್ಥಾನಗಳ ಮತ್ತು ಮಠಗಳ ಜೀರ್ಣೋದ್ಧಾರ ಕಾಮಗಾರಿಗಳಿಗೆ ಒಟ್ಟು 425 ಕೋಟಿ ರೂ. ಅನುದಾನ ನೀಡಲಾಗಿದೆ. ಮುಂದಿನ
2 ವರ್ಷಗಳಲ್ಲಿ ರಾಜ್ಯದಲ್ಲಿನ ವಿವಿಧ ದೇವಸ್ಥಾನ ಮತ್ತು ಮಠಗಳ ಜೀರ್ಣೋದ್ಧಾರಕ್ಕಾಗಿ ನಮ್ಮ ಸರ್ಕಾರ 1,000 ಕೋಟಿ ರೂ.
ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.
404. ಜಗತ್ತಿಗೆ ಸಂಸತ್ತಿನ ಪರಿಕಲ್ಪನೆಯನ್ನು ಪರಿಚಯಿಸಿದ ಬಸವಾದಿ ಶರಣರು ಸ್ಥಾಪಿಸಿದ ಅನುಭವ ಮಂಟಪದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು.
405. ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಇನಾಂ ಜಮೀನುಗಳ ವರ್ಷಾಶನವನ್ನು 48,000 ರೂ. ಗಳಿಂದ 60,೦೦೦ ರೂ. ಗಳಿಗೆ ಹೆಚ್ಚಿಸಲಾಗುವುದು. ಈ ಸೌಲಭ್ಯದಿಂದ 3,721 ಸಂಸ್ಥೆಗಳಿಗೆ ಅನುಕೂಲವಾಗಲಿದೆ.
406. ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಗಳನ್ನು ಮಾದರಿ ಉಪನೋಂದಣಿ ಕಛೇರಿಗಳಾಗಿ ಪರಿವರ್ತಿಸಲಾಗುವುದು. ಮೊದಲನೇ ಹಂತದಲ್ಲಿ ಪ್ರಸಕ್ತ ಸಾಲಿನಲ್ಲಿ 8 ಕಛೇರಿಗಳನ್ನು ಅಭಿವೃದ್ಧಿಪಡಿಸಲಾಗುವುದು.
407. ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯ ಹಂತ-3 ನ್ನು 150 ಕೋಟಿ ರೂ. ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
408. ಕರ್ನಾಟಕ ರಾಜ್ಯದೆಲ್ಲೆಡೆ 7,363 ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿಯವರೆಗೆ 1.5 ಕೋಟಿ ನಾಗರಿಕ ಸೇವೆಗಳನ್ನು ಒದಗಿಸಲಾಗಿದೆ.
409. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಕ್ಕಾಗಿ ಸೈಬರ್‌ ಭದ್ರತೆ ಕಾರ್ಯಾಚರಣೆ ಕೇಂದ್ರವನ್ನು (csoc) ಯಶಸ್ವಿಯಾಗಿ ಅನುಷ್ಠಾನ ಹಾಗೂ ಕಾರ್ಯಗತಗೊಳಿಸಲಾಗಿದೆ.
410. ರಾಜ್ಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 330 ಯೋಜನೆಗಳನ್ನು ನೇರ ನಗದು ವರ್ಗಾವಣೆ ವ್ಯವಸ್ಥೆ ಮತ್ತು ಆಧಾರ್ ಮೂಲಕ ಸೇವಾ ವಿತರಣೆಯಡಿ ತರಲಾಗಿದೆ. ಅದರಲ್ಲಿ
2021-22ನೇ ಸಾಲಿನಲ್ಲಿ 118 ಯೋಜನೆಗಳನ್ನು ಈ ವೇದಿಕೆಯ ವ್ಯಾಪ್ತಿಯಡಿ ತರಲಾಗಿದೆ. ಪ್ರಸಕ್ತ ಸಾಲಿನಲ್ಲಿ 1.43 ಕೋಟಿ ಫಲಾನುಭವಿಗಳ ಖಾತೆಗೆ 6,323 ಕೋಟಿ ರೂ. ಹಣವನ್ನು ಡಿಬಿಟಿ ವ್ಯವಸ್ಥೆಯಡಿ ವರ್ಗಾಯಿಸಲಾಗಿದೆ.
411. ಹಣಕಾಸು ಸಂಸ್ಥೆಗಳನ್ನು FRUITS, ಕಾವೇರಿ ಮತ್ತು ಭೂಮಿ ತಂತ್ರಾಂಶದೊಂದಿಗೆ ಸಂಯೋಜಿಸುವ ಮೂಲಕ ಕೃಷಿ ಸಾಲ ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಕರ್ನಾಟಕ ಸರ್ಕಾರದ FRUITS ಯೋಜನೆಯನ್ನು ಭಾರತ ಸರ್ಕಾರವು
ಅಗ್ರಿ ಸ್ಟಾಕ್‌ ಪ್ರೋಗ್ರಾಮ್‌ ಆಗಿ ಸಂಯುಕ್ತ ಮಾದರಿಯಲ್ಲಿ ದೇಶದೆಲ್ಲೆಡೆ ಪರಿಚಯಿಸಲಾಗಿದೆ.
412. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ತಂತ್ರಾಂಶದ ಅಭಿವೃದ್ಧಿಗಾಗಿ ಕ್ಲೌಡ್‌ ತಂತ್ರಜ್ಞಾನ ಆಧಾರಿತ 3ನೇ ಹಂತದ ದತ್ತಾಂಶ ಕೇಂದ್ರವನ್ನು 590 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
413. ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡಲು ರಾಜ್ಯದ Tier-2 ನಗರಗಳಲ್ಲಿ 100 ರಿಂದ 200 ಆಸನಗಳ ಸಾಮರ್ಥ್ಯವುಳ್ಳ ಮಿನಿ ಥಿಯೇಟರ್ ಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುವುದು.
414. 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ನೂತನ ಪೊಲೀಸ್ ಕಛೇರಿಗಳು, ಪೊಲೀಸ್ ಠಾಣೆಗಳ ನಿರ್ಮಾಣ, ಉನ್ನತೀಕರಣ ಮತ್ತು ಆಧುನೀಕರಣಕ್ಕೆ 348 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದೇ ರೀತಿ 410 ಕೋಟಿ ರೂ. ಗಳ ವೆಚ್ಚದಲ್ಲಿ ಕಾರಾಗೃಹಗಳ ನಿರ್ಮಾಣ ಮತ್ತು 51 ಕೋಟಿ ರೂ. ಗಳ ವೆಚ್ಚದಲ್ಲಿ ಕಾರಾಗೃಹ ಆಧುನೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
415. ಪೊಲೀಸ್‌ ಠಾಣೆಗಳಿಗೆ ಆಧುನಿಕ ಸ್ಪರ್ಶ ನೀಡಲು ರಾಜ್ಯದಲ್ಲಿ 240 ಕೋಟಿ ರೂ. ಗಳ ವೆಚ್ಚದಲ್ಲಿ 116 ನೂತನ ಪೊಲೀಸ್‌ ಠಾಣೆಗಳನ್ನು ನಿರ್ಮಿಸಿ ನಮ್ಮ ಸರ್ಕಾರ ದಾಖಲೆ ನಿರ್ಮಿಸಿರುತ್ತದೆ. ಉಳಿದ ಪೊಲೀಸ್‌ ಠಾಣೆಗಳ ಕಟ್ಟಡ ನಿರ್ಮಾಣ ಕಾರ್ಯವನ್ನು ಮುಂದುವರೆಸಲಾಗುವುದು.
416. ಬೆಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕಾಗಿ ಹೊಸದಾಗಿ ನಾಲ್ಕು ಸಂಚಾರಿ ಪೊಲೀಸ್‌ ಠಾಣೆಗಳನ್ನು ಪ್ರಾರಂಭಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಬೆಂಗಳೂರಿನಲ್ಲಿ ಒಂಭತ್ತು ಕಾನೂನು ಮತ್ತು ಸುವ್ಯವಸ್ಥೆ, ಐದು ಸಂಚಾರಿ, ಆರು ಮಹಿಳಾ ಪೊಲೀಸ್‌ ಠಾಣೆಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು. ಬೆಂಗಳೂರು ನಗರದ ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸಲು ವಿವಿಧ ಹಂತಗಳಲ್ಲಿ ಹೆಚ್ಚುವರಿಯಾಗಿ 2,000 ಹುದ್ದೆಗಳನ್ನು ಸೃಜಿಸಲಾಗುವುದು.
417. ಪೊಲೀಸ್‌ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಅತ್ಯಂತ ಮಹತ್ತರ ಹೆಜ್ಜೆಯನ್ನಿಟ್ಟಿದ್ದು, ʻಪೊಲೀಸ್‌ ಗೃಹ – 2025ʼ ಯೋಜನೆಯಡಿ 2022-23ನೇ ಸಾಲಿನಲ್ಲಿ 250 ಕೋಟಿ ರೂ. ಗಳನ್ನು ಒದಗಿಸಲಾಗಿದ್ದು, ಪ್ರಸಕ್ತ ವರ್ಷ 450 ಕೋಟಿ ರೂ. ಗಳನ್ನು ಒದಗಿಸುವುದರ ಮೂಲಕ 3,000 ವಸತಿ ಗೃಹಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು.
418. ರಾಜ್ಯದಲ್ಲಿ ಈಗಾಗಲೇ 8 ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ವರದಿಗಾಗಿ ಕಾಯುವ ಅವಧಿಯನ್ನು ಎರಡು ವರ್ಷಗಳಿಂದ ಒಂದು ತಿಂಗಳಿಗೆ ಇಳಿಸಲಾಗಿದೆ. ಪ್ರಸಕ್ತ ವರ್ಷ 10 ಕೋಟಿ ರೂ. ವೆಚ್ಚದಲ್ಲಿ ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಪ್ರಾರಂಭಿಸಲಾಗುವುದು.
419. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಧಾರವಾಡದಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಗುವುದು.
420. ಹಳೆಯ ಮತ್ತು ಅನುಪಯುಕ್ತ ವಾಹನಗಳನ್ನು ಹಂತ ಹಂತವಾಗಿ ಬದಲಾಯಿಸಿ ಹೊಸ ವಾಹನಗಳನ್ನು ಇಲಾಖೆಗೆ ಸೇರ್ಪಡೆಗೊಳಿಸಲು ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂ. ಅನುದಾನ ಒದಗಿಸಲಾಗುವುದು.
421. ಕಾರಾಗೃಹದಲ್ಲಿನ ಬಂದಿಗಳ ಅಭ್ಯುದಯಕ್ಕಾಗಿ ಬಂದೀಖಾನೆ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದೆ. ಬಂದಿಗಳ ಜೀವನ ಸುಧಾರಣೆಗೆ ಮತ್ತು ಶಿಕ್ಷೆಯ ಅವಧಿಯ ನಂತರ ಪುನರ್ವಸತಿಗೆ ಸಶಕ್ತೀರಣಗೊಳಿಸಲು ಅಗತ್ಯ ಕೌಶಲ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ರೂಪಿಸಲಾಗಿದೆ. ಬಂದಿಗಳಿಗೆ ನೀಡುವ ಕೂಲಿ ದರಗಳನ್ನು ಕನಿಷ್ಠ ವೇತನ ಕಾಯಿದೆ ಅನ್ವಯ ಹೆಚ್ಚಿಸಲು ಕ್ರಮವಹಿಸಲಾಗಿರುತ್ತದೆ. ಕಾರಾಗೃಹಗಳಲ್ಲಿನ ಆಸ್ಪತ್ರೆಗಳ ನಿರ್ವಹಣೆಯನ್ನು ಸುಧಾರಿಸಲು ಈ ಆಸ್ಪತ್ರೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗುತ್ತಿದೆ.
422. ವಿಜಯಪುರ, ಬೀದರ್‌, ಮಂಗಳೂರು ಮತ್ತು ಬೆಂಗಳೂರು ಕೇಂದ್ರ ಕಾರಾಗೃಹಗಳ ಆವರಣದಲ್ಲಿ ಗರಿಷ್ಠ ಭದ್ರತಾ ಕಾರಾಗೃಹ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಕಾರಾಗೃಹ ಸಾಮರ್ಥ್ಯ 4,000 ರಷ್ಟು ಹೆಚ್ಚಾಗಿರುತ್ತದೆ. ಅಲ್ಲದೇ, ರಾಜ್ಯದ ಉಳಿದ ಕಾರಾಗೃಹಗಳಲ್ಲಿಯೂ ಸಹ 1,465 ಬಂದಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮವಹಿಸಲಾಗಿದೆ.
423. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಕೆ-ಸೇಫ್‍-2 ಯೋಜನೆ ಅಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 125 ಕೋಟಿ ರೂ. ಒದಗಿಸಲಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತ ತಡೆಯಲು ಹಾಗೂ ರಕ್ಷಣಾ ಕಾರ್ಯ ನಿರ್ವಹಿಸಲು 90 ಮೀಟರ್ ಎತ್ತರ ತಲುಪಬಲ್ಲ ಏರಿಯಲ್ ಲ್ಯಾಡರ್ ಪ್ಲಾಟ್‍ಫಾರಂ ವಾಹನ ಖರೀದಿಸಲಾಗಿರುತ್ತದೆ. ಇವೆಲ್ಲ ಕ್ರಮಗಳಿಂದ ಪ್ರಸ್ತುತ ಸಾಲಿನಲ್ಲಿ ಅಗ್ನಿಶಾಮಕ ಇಲಾಖೆಯಿಂದ 3,521 ಮಾನವ ಜೀವ ಹಾಗೂ 794.6 ಕೋಟಿ ರೂ. ಮೊತ್ತದ ಆಸ್ತಿ ಪಾಸ್ತಿ ರಕ್ಷಣೆ ಮಾಡಲು ಸಾಧ್ಯವಾಗಿರುತ್ತದೆ. ಈ ಯೋಜನೆಗೆ ಪ್ರಸಕ್ತ ವರ್ಷದಲ್ಲಿ 100 ಕೋಟಿ ರೂ. ಗಳನ್ನು ಕಾಯ್ದಿರಿಸಲಾಗಿದೆ.
424. ದಾವಣಗೆರೆ ನಗರದಲ್ಲಿ ಹೊಸ ಎಸ್‍.ಡಿ.ಆರ್‍.ಎಫ್. ಕಂಪನಿ ಮಂಜೂರು ಮಾಡಲಾಗಿರುತ್ತದೆ. ರಾಜ್ಯದಲ್ಲಿನ ಎಸ್‍.ಡಿ.ಆರ್‍.ಎಫ್. ಪಡೆಗಳಿಗೆ 30 ಕೋಟಿ ರೂ.ಮೊತ್ತದ ಶೋಧನಾ ಮತ್ತು ರಕ್ಷಣಾ ಉಪಕರಣಗಳನ್ನು ಒದಗಿಸಲಾಗಿದೆ.
425. ರಾಜ್ಯದಲ್ಲಿ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಸಹಾಯಕ ಪಡೆಯಾಗಿ ಕಾರ್ಯ ನಿರ್ವಹಿಸುತ್ತಿರುವ 35 ಸಾವಿರ ನೋಂದಾಯಿತ ಗೃಹರಕ್ಷಕರಿಗೆ ಪ್ರಸ್ತುತ ಪ್ರತಿ ದಿನಕ್ಕೆ ನೀಡುತ್ತಿರುವ ಕರ್ತವ್ಯಭತ್ಯೆ 100 ರೂ. ನಷ್ಟು ಹೆಚ್ಚಿಸಲಾಗುವುದು.
426. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ಇನ್ನಷ್ಟು ಬಲಪಡಿಸಲು 1,000 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು.
427. ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ವ್ಯಾಪಕವಾಗಿದ್ದು, ಈ ವ್ಯವಸ್ಥೆಯ ಸುರಕ್ಷತೆಯೂ ಅತ್ಯಾದ್ಯತೆಯ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ವೆಬ್‌ ಸೈಟ್‌ ಗಳು, ಆನ್-ಲೈನ್‌ ಸೇವೆಗಳು ಮತ್ತು ದತ್ತಾಂಶಗಳ ಸುರಕ್ಷತೆಗಾಗಿ, ಸೈಬರ್‌ ತಜ್ಞರು ಮತ್ತು ಆಧುನಿಕ ತಂತ್ರಜ್ಞಾನವನ್ನೊಳಗೊಂಡ 24×7 ಸೈಬರ್ ಸೆಕ್ಯುರಿಟಿ ಆಪರೇಷನ್ಸ್ ಸೆಂಟರ್ ಅನ್ನು ಸ್ಥಾಪಿಸಲಾಗುವುದು.
428. ರಾಜ್ಯದ ಸಾರಿಗೆ ಇಲಾಖೆಯ ವಾಹನ ಹಾಗೂ ಸಾರಥಿ ಸೇವೆಗೆ ಸಂಬಂಧಿಸಿದ 31 ಸೇವೆಗಳನ್ನು ಸಂಪರ್ಕ ರಹಿತವಾಗಿ ಸಾರ್ವಜನಿಕರಿಗೆ ಆನ್‌ಲೈನ್‌ ಮೂಲಕ ಒದಗಿಸಲಾಗುತ್ತಿದೆ. ಅಲ್ಲದೇ, ಕೇಂದ್ರ ಸರ್ಕಾರದ ಮಾದರಿಯಲ್ಲಿ ʻನೊಂದಾಯಿತ ವಾಹನಗಳ ನಾಶಪಡಿಸುವಿಕೆ ನೀತಿ-2022ʼನ್ನು (Registered Vehicle Scrapping Policy-2022) ಜಾರಿಗೊಳಿಸಿದೆ. ಕೇಂದ್ರದ ಸಹಭಾಗಿತ್ವದಲ್ಲಿ 22 ಕೋಟಿ ರೂ. ವೆಚ್ಚದಲ್ಲಿ Vehicle Location Tracking System (VLTS) ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
429. ಮಂಗಳೂರು ಮತ್ತು ಕಲಬುರಗಿಗಳಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಭಾರಿ ವಾಹನ ಚಾಲಕರ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲಾಗಿರುತ್ತದೆ. ರಾಜ್ಯದ ಶಿವಮೊಗ್ಗ, ಹಾಸನ, ಧಾರವಾಡ, ಮಂಗಳೂರು, ರಾಯಚೂರು ಮತ್ತು ಬೆಳಗಾವಿ ನಗರಗಳಲ್ಲಿ
38 ಕೋಟಿ ರೂ. ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ. ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ, ವಿಜಯಪುರ, ಬೀದರ್, ಯಾದಗಿರಿ ಮತ್ತು ದಾವಣಗೆರೆಗಳಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಮೈಸೂರು ಹಾಗೂ ಧಾರವಾಡಗಳಲ್ಲಿ 31 ಕೋಟಿ ರೂ. ವೆಚ್ಚದಲ್ಲಿ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
430. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿರುತ್ತದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿನ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಲಾರಿ ಚಾಲಕರಿಗೆ ಹಾಗೂ
ಇ-ಕಾಮರ್ಸ್‌ನಡಿ ಡೆಲಿವರಿ ಸೇವೆಯನ್ನು ನೀಡುತ್ತಿರುವವರ ಅವಲಂಬಿತರಿಗೆ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ, ಇಂತಹವರು ಮರಣ ಹೊಂದಿದಲ್ಲಿ 2 ಲಕ್ಷ ರೂ. ಗಳ ವಿಮಾ ಸೌಲಭ್ಯ ಹಾಗೂ ಅಪಘಾತದಲ್ಲಿ ಮರಣ ಹೊಂದಿದಲ್ಲಿ 2 ಲಕ್ಷ ರೂ. ಗಳಂತೆ ಒಟ್ಟು 4 ಲಕ್ಷ ರೂ. ಗಳ ವಿಮಾ ಸೌಲಭ್ಯ ಕಲ್ಪಿಸಲು ʻಮುಖ್ಯಮಂತ್ರಿ ವಿಮಾ ಯೋಜನೆʼ ಯನ್ನು ರೂಪಿಸಲಾಗುವುದು. ಇದರಿಂದ ಒಟ್ಟು 16.50 ಲಕ್ಷ ಜನರಿಗೆ ಸಹಾಯವಾಗುತ್ತಿದೆ.
431. ತುಮಕೂರು, ಹಾವೇರಿ, ಯಲಹಂಕ, ಕಸ್ತೂರಿನಗರ, ಸಕಲೇಶಪುರ, ಕೆಜಿಎಫ್‌, ಚಿಂತಾಮಣಿ, ಸಾಗರ, ಗೋಕಾಕ್‌, ರಾಣೆಬೆನ್ನೂರು, ದಾಂಡೇಲಿ, ಶಿರಸಿ ಮತ್ತು ಭಾಲ್ಕಿ ನಗರಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ಒಟ್ಟು 85 ಕೋಟಿ ರೂ. ಗಳ ವೆಚ್ಚದಲ್ಲಿ ರಸ್ತೆ ಸುರಕ್ಷತಾ ನಿಧಿಯ ಅನುದಾನದಿಂದ ನಿರ್ಮಿಸಲಾಗುವುದು.
432. ಸಾರಿಗೆ ಇಲಾಖೆಯಲ್ಲಿ ಇ-ಚಲನ್ ವ್ಯವಸ್ಥೆಯಡಿ ಪ್ರವರ್ತನ ಚಟುವಟಿಕೆಗಳಲ್ಲಿ ಸಂಗ್ರಹವಾದ ರಾಜಿ ದಂಡವನ್ನು ಪಾವತಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾದೇಶಿಕ
ಸಾರಿಗೆ ಅಧಿಕಾರಿಗಳ ಕಛೇರಿ, ರಾಜಾಜಿನಗರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು ಹಂತ ಹಂತವಾಗಿ ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು.
433. ವಿದ್ಯುತ್‌ ಚಾಲಿತ ವಾಹನಗಳ ಉಪಯೋಗವನ್ನು ಉತ್ತೇಜಿಸುವ ಮೂಲಕ ವಾಯುಮಾಲಿನ್ಯವನ್ನು ಕಡಿಮೆಗೊಳಿಸುವ ದೃಷ್ಟಿಯಿಂದ ರಾಜ್ಯದಲ್ಲಿನ ಸರ್ಕಾರಿ ಕಛೇರಿಗಳು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಡಿಪೋಗಳಲ್ಲಿ ಹಸಿರು ತೆರಿಗೆ ನಿಧಿಯ ಅನುದಾನದಡಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿರುತ್ತದೆ.
434. ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿನ ವ್ಯವಸ್ಥೆಯನ್ನು ಸುಧಾರಿಸುವ ಮತ್ತು ನಿಗಮಗಳನ್ನು ಬಲಪಡಿಸುವ ಉದ್ದೇಶದಿಂದ ರಚಿಸಲಾಗಿದ್ದ ಎಂ. ಆರ್‌ ಶ್ರೀನಿವಾಸಮೂರ್ತಿ ಸಮಿತಿಯು ಸರ್ಕಾರಕ್ಕೆ ವರದಿ ನೀಡಿದ್ದು, ಅದರಲ್ಲಿನ ಶಿಫಾರಸ್ಸುಗಳ ಅನುಸಾರ ನಿಗಮಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಬಸ್ಸುಗಳ ಕಾರ್ಯಾಚರಣೆ ಸೇರಿದಂತೆ ವಿವಿಧ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
435. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ 2022-23ನೇ ಸಾಲಿನಲ್ಲಿ 2,335 ಕೋಟಿ ರೂ. ಗಳ ಮೊತ್ತದ ಆರ್ಥಿಕ ಸಹಾಯವನ್ನು ಒದಗಿಸಲಾಗಿದೆ. ಇದಲ್ಲದೇ 1,505 ಕೋಟಿ ರೂ. ಮೊತ್ತದಲ್ಲಿ ವಾಹನ ತೆರಿಗೆಯಿಂದ ವಿನಾಯಿತಿ ಹಾಗೂ ತೆರಿಗೆಯನ್ನು ಬಂಡವಾಳವಾಗಿ ಪರಿವರ್ತಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ವಿಶೇಷ ಅವಕಾಶವನ್ನು ಮಾಡಿಕೊಡಲಾಗಿರುತ್ತದೆ. ಒಟ್ಟಾರೆಯಾಗಿ 3,840 ಕೋಟಿ ರೂ. ಗಳ ಸಹಾಯವನ್ನು ಒದಗಿಸಲಾಗಿರುತ್ತದೆ.
436. 2022-23ನೇ ಸಾಲಿನಲ್ಲಿ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು 3,526 ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿಕೊಳ್ಳಲು ಕ್ರಮ ವಹಿಸಲಾಗಿರುತ್ತದೆ. 2023-24ನೇ ಸಾಲಿನಲ್ಲಿ 1,200 ಹೊಸ ಬಸ್ಸುಗಳನ್ನು ಸಂಸ್ಥೆಗಳಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರದಿಂದ 500 ಕೋಟಿ ರೂ. ಗಳ ಆರ್ಥಿಕ ಸಹಾಯವನ್ನು ಒದಗಿಸಲಾಗುವುದು. ಪ್ರಪ್ರಥಮ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸಾರಿಗೆ ಸಂಸ್ಥೆಗಳಿಗೆ ಹೊಸ ಬಸ್‌ ಖರೀದಿಗಾಗಿ ಸರ್ಕಾರದಿಂದ ನೆರವು ನೀಡಲಾಗುತ್ತಿದೆ.
437. ವಾಯುಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಸಾರಿಗೆ ನಿಗಮಗಳಲ್ಲಿ ಈಗಾಗಲೇ ವಿದ್ಯುತ್‌ ಚಾಲಿತ ಬಸ್ಸುಗಳನ್ನು ಅಳವಡಿಸಲು ಆರಂಭಿಸಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 1,311 ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 50 ಬಸ್ಸುಗಳ ಕಾರ್ಯಾಚರಣೆ ಪ್ರಾರಂಭಿಸಿದೆ. ಮುಂಬರುವ ವರ್ಷಗಳಲ್ಲಿ ವಿದ್ಯುತ್‌ ಚಾಲಿತ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
438. ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಒಂದು ಕೋಟಿ ರೂ. ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿಗೆ ತರಲಾಗಿದೆ.
439. ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು 100 ಕೋಟಿ ರೂ. ಕಾರ್ಪಸ್ ಫಂಡ್ ರಚಿಸಲು ರಾಜ್ಯ ಸರ್ಕಾರದಿಂದ ಶೇ. 50 ರಷ್ಟು ಮೊತ್ತ ನೀಡಲು ಅನುಮೋದನೆ ನೀಡಲಾಗಿದೆ.
440. ನ್ಯಾಯಾಂಗ ಕಟ್ಟಡಗಳ ಯೋಜನೆಯಡಿಯಲ್ಲಿ ಕಳೆದ
4 ವರ್ಷಗಳಲ್ಲಿ 580 ಕೋಟಿ ರೂ. ವೆಚ್ಚ ಭರಿಸಿದ್ದು, ಇದರಲ್ಲಿ ರಾಜ್ಯದ ಪಾಲು 397 ಕೋಟಿ ರೂ. ಗಳಾಗಿರುತ್ತದೆ. ಈ ಅವಧಿಯಲ್ಲಿ 39 ನ್ಯಾಯಾಂಗ ಕಟ್ಟಡಗಳನ್ನು ಪೂರ್ಣಗೊಳಿಸಲಾಗಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 83 ನ್ಯಾಯಾಲಯಗಳನ್ನು ಪ್ರಾರಂಭಿಸಲಾಗಿದೆ.
441. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು ವಲಯಕ್ಕೆ 2023-24ನೇ ಸಾಲಿಗೆ 68,585 ಕೋಟಿ ರೂ. ಗಳ ಅನುದಾನ ಒದಗಿಸಿದೆ

";