ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಹೋಬಳಿ ವ್ಯಾಪ್ತಿಯ ಕೆಲ ರೈತರಿಗೆ ಕೃಷಿ ಪರಿಕರ ದೊರೆಯದೆ ತೊಂದರೆ ಆಗಿದ್ದು ಕೃಷಿ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಜಮೀನಿನಲ್ಲಿನ ಚಟುವಟಿಕೆಗಳಿಗಾಗಿ ನೇಗಲಿ, ರೋಟಾವೇಟ್ ಸೇರಿದಂತೆ ಹಲವು ಕೃಷಿ ಉಪಕರಣಗಳು ಖಾಸಗಿ ಏಜನ್ಸಿ ಮೂಲಕ ಸಬ್ಸಿಡಿ ದರದಲ್ಲಿ ದೊರೆಯುತ್ತವೆ. ಇದಕ್ಕೆ ಮುಂಚಿತವಾಗಿ ನಿಗಧಿತ ಹಣವನ್ನು ಆರ್‌ಟಿಜಿಎಸ್ ಮೂಲಕ ರೈತರು ಪಾವತಿಸಬೇಕು. ನಂತರದಲ್ಲಿ ವರ್ಕಆರ್ಡ್ರ್ ಮೂಲಕ ಪರಿಕರಗಳು ದೊರೆಯುತ್ತವೆ.
ಆದರೆ ಅಮೀನಗಡ ರೈತ ಸಂಪರ್ಕ ಕೇಂದ್ರದಲ್ಲಿ ನೇಗಲಿ ಹಾಗೂ ರೋಟಾವೇಟ್‌ಗಳಿಗೆ ರೈತರ ಹಣ ಕಟ್ಟಿ ೧೫ ದಿನಗಳಾದರೂ ಈವರೆಗೆ ಪರಿಕರಗಳು ದೊರೆತಿಲ್ಲ. ಸದ್ಯ ಕಬ್ಬು ಕಟಾವು ಮಾಡಿ ಜಮೀನು ಸಮತಟ್ಟು ಮಾಡಬೇಕೆಂದರೆ ಪರಿಕರಗಳ ಅವಶ್ಯಕತೆಯಿದೆ. ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ನಿಮ್ಮ ಪರಿಕರಗಳಿಗೆ ಮೇಲಧಿಕಾರಿಗಳಿಂದ ವರ್ಕ್ ಆರ್ಡರ್ ಬರಬೇಕು ನಂತರ ನೀಡುತ್ತೇವೆ ಎಂಬ ಸಬೂಬು ಹೇಳುತ್ತಾರೆ ಎಂದು ರೈತರು ದೂರಿದ್ದಾರೆ.
ಮತ್ತೊಂದೆಡೆ ಪರಿಕರ ಒದಗಿಸುವ ಖಾಸಗಿ ಏಜನ್ಸಿಯವರು ಇಲ್ಲಿನ ವಿಳಂಬದಿಂದಾಗಿ ಅನುದಾನ ಬೇರೆಡೆ ಹೋಗಿದೆ ಎಂದು ತಿಳಿಸಿದ್ದಾರೆ. ಕೂಡಲೆ ಕೃಷಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ನಿಗಧಿತ ಅವಧಿಯಲ್ಲಿ ಕೃಷಿ ಪರಿಕರ ಒದಗುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.