ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಡಿಸಿಎಂ ಕಾರಜೋಳ ಚಾಲನೆ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಬಾದಾಮಿ ತಾಲೂಕಿನ ವಿವಿಧ ಇಲಾಖೆಗಳ ಅಂದಾಜು ೭೫ ಕೋಟಿ ರೂ.ಗಳಿಗಿಂತಲೂ ಹೆಚ್ಚು ಅಭಿವೃದ್ದಿ ಕಾಮಗಾರಿಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಬಾದಾಮಿ ನಗರದ ನೂತನ ಪ್ರವಾಸಿ ಮಂದಿದಲ್ಲಿ ಹಮ್ಮಿಕೊಂಡ ವಿವಿಧ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯ ಸರಕಾರ ಕುಡಿಯುವ ನೀರು, ವಿದ್ಯುತ್ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ತಾಲೂಕಿನ ಮುಷ್ಠಿಗೇರಿ ಗ್ರಾಮದಲ್ಲಿ ೧೯.೩೩ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ ವಸತಿ ನಿಲಯ ಕಟ್ಟಡ, ಐತಿಹಾಸಿಕ ಪಟ್ಟದಕಲ್ಲಿನಲ್ಲಿ ೨೯.೨೫ ಕೋಟಿ ರೂ.ಗಳ ವೆಚ್ಚದಲ್ಲಿ ಟೂರಿಜಂ ಪ್ಲಾಸಾ ನಿರ್ಮಾಣ, ಜಲಜೀವನ ಮಿಷನ್ ಯೋಜನೆಯಡಿ ವಿವಿಧ ಕುಡಿಯುವ ನೀರು ಹಾಗೂ ಇತರೆ ಸೇರಿದಂತೆ ೭೫ ಕೋಟಿ ರೂ.ಗಳಿಗಿಂತ ಹೆಚ್ಚು ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗಿದೆ ಎಂದರು.
ದೇಶದಲ್ಲಿಯೇ ಕರ್ನಾಟಕ ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಇದ್ದು, ಸದ್ಯ ೩೦ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಬಾದಾಮಿಗೆ ಪ್ರತ್ಯೇಕ ವಿದ್ಯುತ್ ಸ್ಟೇಷನ್ ಸ್ಥಾಪನೆಗೆ ಬೇಡಿಕೆಯಂತೆ ಪ್ರತ್ಯೇಕ ವಿದ್ಯುತ್ ಕೇಂದ್ರ ಕಚೇರಿಯನ್ನು ಉದ್ಘಾಟನೆ ಸಹ ಮಾಡಲಾಗಿದೆ. ಜಿಲ್ಲೆಯಲ್ಲಿ ಹೊಸ ವಿದ್ಯುತ್ ಕೇಂದ್ರಗಳ ಸ್ಥಾಪನೆಗೆ ೫೦೦ ಕೋಟಿ ರೂ.ಗಳ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಮಂಗಳಗುಡ್ಡದಲ್ಲಿ ೯.೯೯ ಕೋಟಿ ರೂ.ಗಳ ವೆಚ್ಚದಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ಬ್ಯಾರೇಜ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ೬೧೮ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಬಡ ಮಕ್ಕಳ ಶಿಕ್ಷಣಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ೮೨೬ ವಸತಿ ಶಾಲೆಗಳಿದ್ದು, ರಾಜ್ಯದಲ್ಲಿ ಒಟ್ಟು ೪ ಲಕ್ಷ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವಷ್ಟು ವಸತಿ ನಿಲಯ ಬೇರಾವ ರಾಜ್ಯದಲ್ಲಿಯೂ ಇಲ್ಲವೆಂದರು. ರಾಜ್ಯದಲ್ಲಿಯೇ ವಸತಿ ಶಾಲೆಗಳು ಒಂಬರ ೧ ದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಮಾತನಾಡಿ ಬಾದಾಮಿ ತಾಲೂಕಿನಲ್ಲಿ ಪ್ರತ್ಯೇಕ ವಿದ್ಯುತ್ ಉಪ ವಿಭಾಗ ಕೇಂದ್ರ ಸ್ಥಾಪನೆಯಿಂದ ಕೃಷಿ ಚಟುವಟಿಕೆಗಳಿಗೆ, ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ. ಇದರ ಜೊತೆ ಟ್ರಾನ್ಸ್ಫರ‍್ಮರ್ ದುರಸ್ಥಿ ಕೇಂದ್ರವು ಸಹ ಅವಶ್ಯಕತೆ ಇದ್ದು, ಕೂಡಲೇ ಮಂಜೂರು ಮಾಡುವಂತೆ ಉಪ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು. ೧೮ ಹಳ್ಳಿಗಳಿಗೆ ವಾರದ ೨೪ ಗಂಟೆಗಳ ಕುಡಿಯುವ ನೀರಿನ ವ್ಯವಸ್ಥೆಗೆ ಕೆಲಸ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.
ಅಭಿವೃದ್ದಿ ಕಾರ್ಯಕ್ಕೆ ವಿದ್ಯುತ್ ಅವಶ್ಯವಾಗಿದ್ದು, ವಿದ್ಯುತ್ ಇದ್ದರೇ ಮಾತ್ರ ಕೈಗಾರಿಕೆ, ಕೃಷಿ ಬೆಳವಣಿಗೆ ಸಾದ್ಯವಾಗುತ್ತದೆ. ಆದ್ದರಿಂದ ರೈತರಿಗೆ ೨ ಗಂಟೆ ಹೆಚ್ಚಿನ ವಿದ್ಯುತ್ ನೀಡಬೇಕು. ಇದರಿಂದ ಆಹಾರ ಉತ್ಪಾದನೆ ಹೆಚ್ಚಾಗಿ ಆಹಾರದ ಸ್ವಾವಲಂಭನೆ ಸಾಧಿಸಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಶ್ರೀಮಂತರಿಗೂ ದೊರೆಯುವ ಶಿಕ್ಷಣ ಬಡವರಿಗೂ ಸಿಗುವಂತಾದಲ್ಲಿ ಮಾತ್ರ ಎಲ್ಲ ಮಕ್ಕಳಲ್ಲಿ ಸಮಾನ ಬೆಳೆವಣಿಗೆ ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ತುರ್ತಾಗಿ ಮೆಡಿಕಲ್ ಕಾಲೇಜು ಪ್ರಾರಂಭಿಸುವAತೆ ಉಪ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ, ಬಾದಾಮಿ ತಾ.ಪಂ ಅಧ್ಯಕ್ಷೆ ರೇಖಾ ತಿರಕನ್ನವರ, ಉಪಾಧ್ಯಕ್ಷೆ ಪೂರ್ಣಿಮಾ ಪಾಟೀಲ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮುನಿರಾಜ, ತಾಂತ್ರಿಕ ನಿರ್ದೇಶಕ ಎ.ಚ್.ಕಾಂಬಳೆ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೆ.ಎನ್.ರಮೇಶ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನೀಯರ್ ಪ್ರಶಾಂತ, ತಹಶೀಲ್ದಾರ ಸುಹಾಸ್ ಇಂಗಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.