ಬಿಡಾಡಿ ದನಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಅವುಗಳ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಾಮಾನ್ಯಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ನೂತನ ಅಧ್ಯಕ್ಷರ ಅಧಿಕಾರದ ನಂತರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಈ ಒತ್ತಾಯ ಮಾಡಲಾಯಿತು. ಪಟ್ಟಣದಲ್ಲಿನ ಬಿಡಾಡಿ ದನಗಳಿಂದಾಗಿ ಸಾರ್ವಜನಿಕರು ಅಪಾಯ ಎದುರಿಸುತ್ತಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಸಂಚಕಾರ ಬಂದೊದಗಿದೆ. ಕೂಡಲೆ ಸಂಬAಧಿಸಿದವರಿಗೆ ಮತ್ತೊಮ್ಮೆ ತಿಳಿವಳಿಕೆ ನೀಡಿ. ಅದಕ್ಕೂ ಬಗ್ಗದಿದ್ದರೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು.
ಪಪಂ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಬಿಡಾಡಿ ದನಗಳ ಮಾಲಿಕರಿಗೆ ಈಗಾಗಲೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿದೆ. ಮತ್ತೊಮ್ಮೆ ಎಚ್ಚರಿಕೆ ನೀಡಲಾಗುವುದು. ನಂತರದಲ್ಲಿ ದಿನವೊಂದಕ್ಕೆ ೫೦೦ ದಂಡ ವಿಧಿಸುವುದಲ್ಲದೆ ಗೋಶಾಲೆಗಳಿಗೆ ಬಿಟ್ಟು ಬರಲಾಗುವುದು ಎಂದರು.
ಪಟ್ಟಣದ ರಾಜ್ಯ ಹೆದ್ದಾರಿ ಪಕ್ಕದ ಚರಂಡಿಗಳ ಶಿಥಿಲಾವಸ್ಥೆಯೊಂದಿಗೆ ಬಿದ್ದು ಹೋಗಿವೆ. ನಿರ್ವಹಣೆ ಕುರಿತು ಕೇಳಿದರೆ ಪಿಡಬ್ಲೂಡಿ ಇಲಾಖೆ ಪಪಂನತ್ತ ಬೊಟ್ಟು ತೋರಿಸುತ್ತದೆ. ಪಪಂ ಅಧಿಕಾರಿಗಳು ನಮಗೆ ಸಂಬAಧಿಸಿಲ್ಲ ಎಂಬ ಸಬೂಬು ನೀಡುತ್ತಾರೆ. ಜನರಿಗೆ ಹಾರಿಕೆ ಉತ್ತರ ನೀಡಬೇಡಿ. ಸಮಸ್ಯೆ ಬಗೆಹರಿಸುವತ್ತ ಚಿಂತೆ ಇರಲಿ ಎಂದು ನಾಮ ನಿರ್ದೇಶಿತ ಸದಸ್ಯ ಮಲ್ಲಪ್ಪ ಬಂಡಿವಡ್ಡರ ತಿಳಿಸಿದರು.
ಕಸ ಸಂಗ್ರಹಣೆ ವೈಜ್ಞಾನಿಕವಾಗಿರಲಿ. ಹೆದ್ದಾರಿಪಕ್ಕದ ಚರಂಡಿಯಲ್ಲೇ ಅಕ್ಕಪಕ್ಕದ ಅಂಗಡಿಕಾರರು ಕಸ ಬಿಸಾಕುತ್ತಿರುವುದರಿಂದ ಮಳೆ ಬಂದಾಗ ತೀವ್ರ ತೊಂದರೆ ಅನುಭವಿಸುವಂತಾಗುತ್ತದೆ. ಅಂತವರಿಗೆ ಎಚ್ಚರಿಕೆ ನೀಡಿ. ಇಲ್ಲವೆ ಪಪಂ ವತಿಯಿಂದ ವೈಜ್ಞಾನಿಕ ಕಸ ಸಂಗ್ರಹಣೆಗೆ ಮುಂದಾಗಿ ಎಂದು ಪಪಂ ಸದಸ್ಯ ಗುರುನಾಥ ಚಳ್ಳಮರದ, ವಿಜಯಕುಮಾರ ಕನ್ನೂರ ಆಗ್ರಹಿಸಿದರು.
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು ಅನುಮೋದನೆಗೊಂಡ ಸಿಬ್ಬಂದಿಯ ಗೌರವಧನ ಶೀಘ್ರ ಪಾವತಿಯಾಗಬೇಕು. ವಿಳಂಬ ಕಾಮಗಾರಿಗಳು ಕುರಿತು ನೋಟೀಸ್ ನೀಡುತ್ತೇವೆ ಎಂಬ ಕಾಲಹರಣ ಸರಿಯಲ್ಲ. ಕೆಲಸಗಳು ನಿಗಧಿತ ಅವಧಿಯಲ್ಲಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಒದಗುವಂತಾಗಬೇಕು. ಪಟ್ಟಣದ ಎರಡೂ ಮಾರ್ಗದಲ್ಲಿ ಹಲವು ವರ್ಷದಿಂದ ಪೂರ್ಣಗೊಳ್ಳದೆ ಸ್ವಾಗತ ಕಮಾನುಗಳು ಪಟ್ಟಣದ ಸ್ಥಿತಿಗತಿಯನ್ನು ಬಿಚ್ಚಿಟ್ಟಂತೆ ತೋರುತ್ತಿದೆ. ಕೂಡಲೆ ಅಂತಹ ಕಾಮಗಾರಿಗೆ ವಿಳಂಬ ಮಾಡದೆ ಪೂರ್ಣಗೊಳ್ಳುವಂತಾಗಬೇಕು. ಪಪಂ ಜೆಇ ಎಲ್ಲದರಲ್ಲೂ ನಿರಾಸಕ್ತಿ ತೋರುತ್ತಿರುವುದು ಸರಿಯಲ್ಲ ಎಂದು ಸದಸ್ಯರು ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಜಾನುವಾರು ಹಾಗೂ ಸಂತೆ ಮಾರುಕಟ್ಟೆಗೆ ಕರ ಲೀಲಾವು, ಅಕ್ಟೋಬರ್ ತಿಂಗಳ ಜಮಾ-ಖರ್ಚು, ಕಾಮಗಾರಿ ಬದಲಾವಣೆ, ೨೦೧೬-೧೭ನೇ ಸಾಲಿನ ೧೪ನೇ ಹಣಕಾಸು ಅನುದಾನ ಉಳಿತಾಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಾಮಗ್ರಿ ಖರೀದಿ, ಜೆಸಿಬಿ ಹಾಗೂ ಸಕ್ಕಿಂಗ್ ಮಶೀನ್‌ಗಳನ್ನು ವೈಯುಕ್ತಿಕ ಉಪಯೋಗಕ್ಕಾಗಿ ದರ ನಿಗಧಿ ಹಾಗೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ವಿಷಯಗಳ ಕುರಿತು ಚರ್ಚಿಸಲಾಯಿತು.
ಪಪಂ ಅಧ್ಯಕ್ಷ ಸಂಗಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಂಕ್ರಮ್ಮ ಗೌಡರ, ಸದಸ್ಯರಾದ ಸೋನಾಬಾಯಿ ಲಮಾಣಿ, ಯಮನಪ್ಪ ಕುರಿ, ಶೇಖಪ್ಪ ಲಮಾಣಿ, ನಾಗವ್ವ ಕುಂಬಾರ, ಪರಶುರಾಮ ಪುರ್ತಗೇರಿ, ವಿಜಯಾ ಐಹೊಳ್ಳಿ, ಜೆಇ ವಿ.ಎಚ್.ಚವಡಿ, ಸಿಬ್ಬಂದಿಗಳಾದ ಜೆ.ಡಿ.ಹುಬ್ಳೀಕರ, ಸಂತೋಷ ವ್ಯಾಪಾರಿಮಠ, ಶೈಲಾ ಛಲವಾದಿ, ಐ.ಎಲ್.ಗುಡ್ಡದ, ವಿಶ್ವನಾಥ ಆಲಮೇಲ, ಮಂಜುನಾಥ ಪೂಜಾರಿ ಇತರರು ಇದ್ದರು.
ಕಾಂಗ್ರೆಸ್ ಸದಸ್ಯರು ಗೈರು
ನೂತನ ಅಧ್ಯಕ್ಷರ ಆಯ್ಕೆ ನಂತರ ನಡೆದ ಮೊದಲ ಸಭೆಗೆ ಕಾಂಗ್ರೆಸ್ ೭ ಸದಸ್ಯರು ಗೈರು ಹಾಜರಾಗಿದ್ದರು. ಸಭೆಯಲ್ಲಿ ಕೆಲವರು ಮಾಸ್ಕ್ ಧರಿಸದೆ ಹಾಜರಿದ್ದದ್ದು ಮುಜುಗರಕ್ಕೆ ಕಾರಣವಾಯಿತು.