ಆಸ್ಪತ್ರೆ ಮೇಲ್ದರ್ಜೆಗೆ ಪರಿಶೀಲನೆ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ಪಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹಕ್ಕೆ ಉತ್ತರಿಸಿದ ಅವರು, ಈಗಾಗಲೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮತ್ತೊಮ್ಮೆ ಈ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿ ಸಮುದಾಯ ಆರೋಗ್ಯ ಕೇಂದ್ರವಾಗಿಸುವಲ್ಲಿ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪಪಂನ ಆರೋಗ್ಯ ಹಾಗೂ ನೀರು ಸರಬರಾಜು ಶಾಖೆಯ ಹೊರಗುತ್ತಿಗೆ ಸಿಬ್ಬಂದಿಗೆ ಕಳೆದೆರಡು ತಿಂಗಳಿನಿಂದ ವೇತನ ದೊರೆಯದಿರುವುದನ್ನು ಗಮನಿಸಿದ ಶಾಸಕರು ಮುಂದಿನ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬಾಕಿ ವೇತನ ಪಾವತಿಸಿ ಎಂದು ಸೂಚನೆ ನೀಡಿದರು. ಹೈಮಾಸ್ಟ್ಗೆ ಎಲ್‌ಇಡಿ ಬಲ್ಪ ಅಳವಡಿಸಿ. ಶೇ.೧೦ಕ್ಕಿಂತ ಕಡಿಮೆ ಟೆಂಡರ್ ದರ ನಮೂದಿಸಿದ್ದರೆ ಅಂತವುಗಳನ್ನು ಬ್ಲಾಕ್ ಲಿಸ್ಟ್ನಲ್ಲಿಡಿ. ಕಡಿಮೆ ದರ ನಮೂದಿಸಿದವರು ಕಾಮಗಾರಿ ಅವಧಿಯಲ್ಲಿ ಅರ್ಧಕ್ಕೆ ನಿಲ್ಲಿಸಿರುವ ನಿದರ್ಶನಗಳಿವೆ ಎಂದು ಹೇಳಿದರು.
ಕುರಿ, ಮೇಕೆ ಮಾರುಕಟ್ಟೆ ಜಾಗದ ಕುರಿತು ಸೂಕ್ತ ವ್ಯವಸ್ಥೆ ಮಾಡಿ. ಹೀಗೆ ಮುಂದುವರೆದರೆ ಪಟ್ಟಣಕ್ಕೆ ಆದಾಯ ತರುವ ಜಾನುವಾರು ಮಾರುಕಟ್ಟೆ ಕೈ ಬಿಟ್ಟು ಹೋಗುವ ಹಂತಕ್ಕೆ ಬರುತ್ತದೆ. ಸ್ಥಳಾಂತರ ವಿಷಯ ಕುರಿತು ಹಿಂದಿನ ಸಭೆಯಲ್ಲೇ ಠರಾವು ಪಾಸ್ ಮಾಡಿ ೧೫ ದಿನದೊಳಗೆ ಸಭೆ ಕರೆಯುವಂತೆ ಸೂಚಿಸಿದ್ದರೂ ನಿರ್ಲಕ್ಷ ಬೇಡ ಎಂದು ಪಪಂ ಸದಸ್ಯ ಮನೋಹರ ರಕ್ಕಸಗಿ, ಗುರುನಾಥ ಚಳ್ಳಮರದ, ವಿಜಯಕುಮಾರ ಕನ್ನೂರ ಇತರರು ಅಧಿಕಾರಿಗಳನ್ನು ಒತ್ತಾಯಿಸಿದರು.
ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಜಾನುವಾರ ಮಾರುಕಟ್ಟೆ ಕುರಿತು ಶೀಘ್ರ ವ್ಯವಸ್ಥೆ ಮಾಡಲಾಗುವುದು ಎಂದರು. ಪಪಂ ಅಧ್ಯಕ್ಷ ಸಂಗಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಡಳಿತದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಎಇಇ ಎಂ.ಜಿ.ಕಿತ್ತಲಿ, ಜೆಇ ನವೀದ ಖಾಜಿ, ಸದಸ್ಯರಾದ ಶಾಂತವ್ವ ಯಂಕಂಚಿ, ಬಿ.ಎಸ್.ನಿಡಗುಂದಿ, ಯಮನಪ್ಪ ಕುರಿ, ಸಂಗಪ್ಪ ಗೌಡರ, ಹುಸೇನ ಪಟೇಲ್, ನಾಗವ್ವ ಕುಂಬಾರ, ಶೇಖಪ್ಪ ಲಮಾಣಿ, ಸುಜಾತಾ ತತ್ರಾಣಿ, ಹೊನ್ನಳೆಪ್ಪ ಐಹೊಳ್ಳಿ, ಪರಶುರಾಮ ಪುರ್ತಗೇರಿ, ವಿಜಯಾ ಐಹೊಳ್ಳಿ ಹಾಗೂ ಸಿಬ್ಬಂದಿ ಇದ್ದರು.