ಮಹಾರಾಷ್ಟ್ರ : ರಾಜ್ಯದ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಪಂಢರಪುರದ ಶ್ರೀವಿಠಲ – ರುಕ್ಮಿಣಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ಮಹತ್ವದ ಮಾಹಿತಿಯಿಂದನ್ನು ನೀಡಿದ್ದು, ಹೊಸ ಪದ್ದತಿ ಮುಂದಿನ ಕೆಲವು ತಿಂಗಳವರೆಗೆ ಇರಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ದೇವಾಲಯದಲ್ಲಿ ಕೆಲವೊಂದು ಜೀರ್ಣೋದ್ದಾರ ಮತ್ತು ತುರ್ತು ಕಾಮಗಾರಿ ನಡೆಯಬೇಕಾಗಿರುವುದರಿಂದ, ಮುಂದಿನ ಕೆಲವು ತಿಂಗಳವರೆಗೆ ವಿಠಲ ರುಕ್ಮಿಣಿಯ ದರ್ಶನ ಮಾತ್ರ ಪಡೆಯಬಹುದಾಗಿದೆ ಎಂದು ದೇವಾಲಯದ ಟ್ರಸ್ಟಿ ಹೇಳಿದ್ದಾರೆ. ಸಾಮಾನ್ಯವಾಗಿ, ಭಕ್ತರಿಗೆ ದೇವರ ಪಾದಮುಟ್ಟಿ ನಮಸ್ಕರಿಸುವ ವ್ಯವಸ್ಥೆ ಇದ್ದು, ಅದು ಮುಂದಿನ ಆದೇಶದವರೆಗೆ ಇರುವುದಿಲ್ಲ.
ದೇವರ ವಿಗ್ರಹದ ಪಾದಮುಟ್ಟಿ ನಮಸ್ಕರಿಸುವ ಪದ್ದತಿಯನ್ನು ಮುಂದಿನ 45 ದಿನದವರೆಗೆ ಸ್ಥಗಿತಗೊಳಿಸಲಾಗಿದೆ, ದೇವರ ಮುಖದರ್ಶನವನ್ನು ಮಾತ್ರ ಪಡೆಯಬಹುದಾಗಿದೆ. ಇದು ದಿನದ ಆರು ಗಂಟೆಯ ಅವಧಿಗೆ ಮಾತ್ರ ದರ್ಶನದ ವ್ಯವಸ್ಥೆ ಇರಲಿದೆ ” ಎಂದು ದೇವಾಲಯದ ಟ್ರಸ್ಟಿ ಹೇಳಿದ್ದಾರೆ.
ದೇವರ ದರ್ಶನವನ್ನು ಕೂಡಾ ಹತ್ತಿರದಿಂದ ಪಡೆಯುವ ವ್ಯವಸ್ಥೆಯನ್ನೂ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಮೂವತ್ತು ಅಡಿ ದೂರದಿಂದ ದೇವರ ದರ್ಶನವನ್ನು ಪಡೆಯಬಹುದು ಮತ್ತು ಮೇ ಐದರವರೆಗೆ ಅಥವಾ ಜೀರ್ಣೋದ್ದಾರದ ಕೆಲಸ ಈ ಅವಧಿಯಲ್ಲಿ ಮುಗಿಯದಿದ್ದರೆ ಇನ್ನೂ ಮುಂದುವರಿದ ದಿನಕ್ಕೆ ಈ ಪದ್ದತಿ ಜಾರಿಯಲ್ಲಿರಲಿದೆ.
ಮಹಾರಾಷ್ಟ್ರ ಸರ್ಕಾರ ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ದೇವಾಲಯದ ಕಾಮಗಾರಿ ಮತ್ತು ಜೀರ್ಣೋದ್ದಾರದ ಕೆಲಸಕ್ಕೆ 72 ಕೋಟಿ ರೂಪಾಯಿಯನ್ನು ಮಂಜೂರು ಮಾಡಿತ್ತು. ಪ್ರಮುಖವಾಗಿ, ವಿಗ್ರಹ ಸಂರಕ್ಷಣೆಗಾಗಿ ಗರ್ಭಗುಡಿಯಲ್ಲಿ ಗ್ರಾನೈಟ್ ಅಳವಡಿಸುವ ಕೆಲಸ ಆರಂಭವಾಗಿದೆ ಎಂದು ಮಾಹಿತಿ ಕಂಡು ಬಂದಿದೆ.