ಮರಾಠಾ ಅಭಿವೃದ್ಧಿ ನಿಗಮಕ್ಕೆ ಜಯ ಕರ್ನಾಟಕ ವಿರೋಧ
ನಿಮ್ಮ ಸುದ್ದಿ ಬಾಗಲಕೋಟೆ
ರಾಜ್ಯ ಸರಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಕೂಡಲೆ ಹಿಂಪಡೆಯಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಹುನಗುಂದ ತಾಲೂಕು ಅಧ್ಯಕ್ಷ, ವಕೀಲರಾದ ಸಂಜಯ ಐಹೊಳ್ಳಿ ಆಗ್ರಹಿಸಿದರು.
ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ನೀಡಿದ ಬಂದ್ ಕರೆ ವೇಳೆ ಹುನಗುಂದ ತಾಲೂಕಿನ ಅಮೀನಗಡದ ನಾಡಕಚೇರಿಯಲ್ಲಿ ಮನವಿ ಸಲ್ಲಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರತಿಯೊಬ್ಬರೂ ಕನ್ನಡಿಗರೇ ಎಂದು ಭಾವಿಸಿ ಬದುಕುತ್ತಿರುವ ಮಧ್ಯೆ ಭಾಷೆ, ಭಾಷಿಕರ ನಡುವೆ ಗೋಡೆ ಕಟ್ಟಿ ಸರಕಾರ ಚುನಾವಣೆಯ ಬೆಂಕಿಯಲ್ಲಿ ತನ್ನ ಚಳಿ ಕಾಯಿಸಿಕೊಳ್ಳುವ ಪ್ರವೃತ್ತಿಗೆ ಕೈ ಹಾಕಿರುವುದು ಶೋಚನೀಯ ಎಂದರು.
ಪ್ರತಿ ಭಾಷಿಕರಿಗೂ ಸಹ ಒಂದೊಂದು ಅಭಿವೃದ್ಧಿ ಪ್ರಾಧಿಕಾರ ರಚನೆ, ಪ್ರತಿ ಜಾತಿಗೂ ನಿಗಮ ಮಂಡಳಿ ರಚಿಸುತ್ತ ಹೋದರೆ ತಂದೆ ಮತ್ತು ತಾಯಿ ಸ್ಥಾನದಲ್ಲಿ ನಿಂತಿರುವ ಸರಕಾರವೇ ಪ್ರಜೆಗಳ ನಡುವೆ ವೈಮನಸ್ಸು ಉಂಟು ಮಾಡಿದಂತಾಗುತ್ತದೆ. ಸರಕಾರದಲ್ಲಿ ನೌಕರರಿಗೆ ಇನ್ನೂ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ ಎಂಬ ಕೂಗಿದೆ. ಸರಕಾರದ ಬೊಕ್ಕಸ ಬರಿದಾಗಿದೆ. ಅಭಿವೃದ್ಧಿ ಕಾರ್ಯಗಳೇ ಕುಂಠಿತವಾಗಿರುವಾಗ ರಾಜ್ಯ ಸರಕಾರ ಹೀಗೆ ನಾನಾ ನಿಗಮ, ಪ್ರಾಧಿಕಾರ ರಚಿಸಿ ವಿಶೇಷ ಅನುದಾನ ನೀಡಿದರೆ ಸಚಿವಾಲಯಗಳಿಗೆ ಕೆಲಸವಿಲ್ಲದಂತಾಗಿ ರಾಜ್ಯದ ಬೊಕ್ಕಸ ಖಾಲಿಯಾಗಿ ಸಾಲದ ಲೆಕ್ಕ ಬೆಳೆಯುತ್ತದೆ ಎಂದು ದೂರಿದರು.
ನಮ್ಮ ರಾಜ್ಯದಲ್ಲಿ ಕೋವಿಡ್, ಪ್ರವಾಹ, ಅತಿವೃಷ್ಟಿ, ರೈತರ ಆತ್ಮಹತ್ಯೆ, ನಿರುದ್ಯೋಗ, ಬರ ನೀಗೆ ನಾನಾ ಸಮಸ್ಯೆಗಳಿದ್ದು ಅವುಗಳ ಬಗ್ಗೆ ಹೆಚ್ಚಿನ ಗಮನಹರಿಸುವ ಅವಶ್ಯಕತೆಯಿದೆ. ರಾಜ್ಯದಲ್ಲಿ ಸಹೋದರತ್ವದಿಂದ ಇರುವ ಮರಾಠರು ಮತ್ತು ಕನ್ನಡಿಗರ ಮಧ್ಯೆ ಸೌಹಾರ್ದತೆಯಿಂದ ಬದುಕಲು ಸರಕಾರ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಅಧ್ಯಕ್ಷ ಮಂಜು ಭಜಂತ್ರಿ, ಉಪಾಧ್ಯಕ್ಷ ಚಂದ್ರಶೇಖರ ಹಳ್ಳಿ, ಮುತ್ತು ಭಜಂತ್ರಿ, ಹುಲ್ಲಪ್ಪ ಭಜಂತ್ರಿ ಇತರರು ಇದ್ದರು.