ಬೆಂಗಳೂರು: ಮುಸ್ಲಿಮರ ಓಲೈಕೆಯಲ್ಲೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭಾರಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಮೊಹಲ್ಲಾಗಳ ಅಭಿವೃದ್ಧಿಗೆ 1,000 ಕೋಟಿ ರೂಪಾಯಿ ನೀಡಲು ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಸರ್ಕಾರದ ನಡೆ ತರಾಟೆಗೆ ತೆಗೆದುಕೊಂಡಿದ್ದು, ಮೊನ್ನೆ ತಾನೇ ರಾಜ್ಯದಲ್ಲಿ ಮುಸ್ಲಿಂ ಪರ ಸರ್ಕಾರ ಇದೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಮುಸ್ಲಿಮರ ದಯೆಯಿಂದ ಎಂದು ಹಿಂದೂ ಮತದಾರರಿಗೆ ಅಪಮಾನ ಮಾಡಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಮೇಲೆ ಪೈಪೋಟಿ ಬಿದ್ದಂತೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊಹಲ್ಲಾ ಅಭಿವೃದ್ಧಿಗೆ 1,000 ಕೋಟಿ ರೂಪಾಯಿ ನೀಡಲು ಮುಂದಾಗಿದ್ದಾರೆ ಎಂದರು.
ಮೋಹಲ್ಲಾಗಳಿಗೆ 1000 ಕೋಟಿ ರೂಪಾಯಿ ನೀಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣ ಇದೆ. ಆದರೆ ಬರ ಬಂದು ಎಂಟು ತಿಂಗಳಾದರೂ ರೈತರಿಗೆ 2,000 ರೂಪಾಯಿ ಪರಿಹಾರ ನೀಡಲು ಹಣವಿಲ್ಲ ಎಂದು ಆರೋಪಿಸಿದ್ದಾರೆ.ಸಿಎಂ ಸಿದ್ದರಾಮಯ್ಯನವರೇ, ಮುಸ್ಲಿಮರ ತುಷ್ಟೀಕರಣ ಮಾಡಲು ನಿಮ್ಮ ಕಾಂಗ್ರೆಸ್ ಪಕ್ಷ ಯಾವ ಮಟ್ಟಕ್ಕಾದರೂ ಹೋಗುತ್ತದೆ ಎಂದು ಪದೇ ಪದೇ ನಿರೂಪಿಸುತ್ತಲೇ ಇದ್ದೀರಿ. ಆದರೆ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಅನ್ನ ನೀಡುವ ರೈತರನ್ನೂ ನಿಮ್ಮ ಓಲೈಕೆ ರಾಜಕಾರಣದಲ್ಲಿ ಬಲಿಪಶು ಮಾಡಬೇಡಿ ಎಂದು ತಿಳಿಸಿದರು.