ಬೆಂಗಳೂರು ಸಮಗ್ರ ಅಭಿವೃದ್ಧಿ
313. ವಿಶ್ವದಲ್ಲಿಯೇ ತಂತ್ರಜ್ಞಾನದ ಕೇಂದ್ರವಾಗಿ ಗುರುತಿಸಿಕೊಂಡಿರುವ ನಗರ ಬೆಂಗಳೂರು. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಸುಗಮ ಸಂಚಾರ, ರಸ್ತೆ, ರಾಜಕಾಲುವೆಗಳ ಅಭಿವೃದ್ಧಿಯ ಮೂಲಕ ಪ್ರವಾಹ ತಡೆಗಟ್ಟುವುದು, ವೈಜ್ಞಾನಿಕ ಹಾಗೂ ದಕ್ಷ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ರೂಪಿಸುವುದರೊಂದಿಗೆ ಜನರ ಬದುಕಿನ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳಿಗೂ ನಮ್ಮ ಸರ್ಕಾರ ಆದ್ಯತೆ ನೀಡಿದೆ.
314. ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರದಲ್ಲಿ 6,000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹೈ ಡೆನ್ಸಿಟಿ ಕಾರಿಡಾರ್ ಯೋಜನೆಯಡಿಯಲ್ಲಿ ಒಟ್ಟು 108 ಕಿ.ಮೀ. ರಸ್ತೆಗಳನ್ನು 273 ಕೋಟಿ ರೂ. ಗಳ ಅಂದಾಜಿನಲ್ಲಿ ತೆಗೆದುಕೊಳ್ಳಲಾಗಿದೆ. ಮಳೆ ನೀರು ಮುಕ್ತವಾಗಿ ಹರಿಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರವಾಹವನ್ನು ತಪ್ಪಿಸಲು, ಒಟ್ಟು 195 ಕಿ.ಮೀ. ಉದ್ದದ ಚರಂಡಿ ಮತ್ತು ಕಲ್ವರ್ಟ್‌ಗಳ ಅಭಿವೃದ್ಧಿಗಾಗಿ 1,813 ಕೋಟಿ ರೂ. ಗಳನ್ನು ಒದಗಿಸಲಾಗಿದೆ.
315. ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರಮುಖ 75 ಜಂಕ್ಷನ್‌ಗಳನ್ನು 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇದಕ್ಕೆ ಪೂರಕವಾಗಿ Artificial Intelligence ನ ಬಳಕೆಯೊಂದಿಗೆ ಟ್ರಾಫಿಕ್ ಸಿಗ್ನಲ್‌ಗಳ ನಿರ್ವಹಣೆ ಮಾಡುವ ಮೂಲಕ Seamless Signalling ಅನ್ನು ಅಳವಡಿಸಿಕೊಂಡು ಸಂಚಾರ ದಟ್ಟಣೆ ಕಡಿಮೆ ಮಾಡಲಾಗುವುದು.
316. ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿ ವರೆಗೆ 350 ಕೋಟಿ ರೂ. ವೆಚ್ಚದಲ್ಲಿ 5 ಕಿ.ಮೀ. ಎಲಿವೇಟೆಡ್ ರಸ್ತೆ ನಿರ್ಮಾಣ ಹಾಗೂ ಸಬ್ ಅರ್ಬನ್ ರೈಲ್ವೆ ನಿಗಮದ ರೈಲು ಜಾಲದೊಂದಿಗೆ ಸಮನ್ವಯ ಸಾಧಿಸಿ ಯಶವಂತಪುರ ರೈಲು ನಿಲ್ದಾಣದಿಂದ ಮತ್ತಿಕೆರೆ ಹಾಗೂ ಬಿ.ಇ.ಎಲ್ ರಸ್ತೆಯ ವರೆಗೆ Integrated ಮೇಲ್ಸೇತುವೆ ನಿರ್ಮಿಸಿ ನೇರ ಸಂಪರ್ಕ ಒದಗಿಸಲಾಗುವುದು.
317. 1,00೦ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ 120 ಕಿ.ಮೀ. ಆರ್ಟೀರಿಯಲ್ ರಸ್ತೆಯ ವೈಟ್ ಟಾಪಿಂಗ್ ಹಾಗೂ ನಗರದ 300 ಕಿ.ಮೀ. ಆರ್ಟೀರಿಯಲ್ ಹಾಗೂ ಸಬ್-ಆರ್ಟೀರಿಯಲ್ ರಸ್ತೆಗಳನ್ನು 450 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು.
318. ಬಿಬಿಎಂಪಿಗೆ ಸೇರ್ಪಡೆಯಾದ 110 ಗ್ರಾಮಗಳಲ್ಲಿ ದುಸ್ಥಿತಿಯಲ್ಲಿರುವ ರಸ್ತೆಗಳ ಪುನರ್ ನಿರ್ಮಾಣಕ್ಕಾಗಿ 300 ಕೋಟಿ ರೂ. ಒದಗಿಸಲಾಗುವುದು.
319. ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ಟರ್ಮಿನಲ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಅದರ ಸುತ್ತಮುತ್ತಲಿನ ಸಂಪರ್ಕ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಮತ್ತು ಸಂಚಾರ ದಟ್ಟಣೆ ಪ್ರಮಾಣವನ್ನು ಕಡಿಮೆ ಮಾಡಲು 300 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
320. ಬೆಂಗಳೂರು ಮೆಟ್ರೋ ರೈಲು ಯೋಜನೆಯ ಒಟ್ಟು 56 ಕಿ.ಮೀ.ಗಳ ಜಾಲವು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 30 ನಿಲ್ದಾಣಗಳೊಂದಿಗೆ,
58.19 ಕಿ.ಮೀ.ಗಳ ಮೆಟ್ರೋ ರೈಲು ಯೋಜನೆಯ ಕಾಮಗಾರಿಗಳು ವೇಗದಲ್ಲಿ ಪ್ರಗತಿಯಲ್ಲಿವೆ. ಪ್ರಸಕ್ತ ವರ್ಷದಲ್ಲಿ 40.15 ಕಿ.ಮೀ. ಉದ್ದದ ಮೆಟ್ರೋ ಮಾರ್ಗಗಳನ್ನು ಕಾರ್ಯಗತಗೊಳಿಸಲು ಯೋಜಿಸಲಾಗಿದೆ.
321. ಹಿಂದಿನ ಆಯವ್ಯಯದಲ್ಲಿ ಮೆಟ್ರೋ ಜಾಲದ 3ನೇ ಹಂತದ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಿದ್ದೇನೆ. 44.65 ಕಿ.ಮೀ. ಉದ್ದದ
31 ನಿಲ್ದಾಣಗಳನ್ನು ಒಳಗೊಂಡಂತೆ 2 ಮಾರ್ಗಗಳ ವಿಸ್ತೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇದಕ್ಕೆ 16,328 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದ್ದು, ಕೇಂದ್ರ ಸರ್ಕಾರದ ಅನುಮತಿ ದೊರಕಿದ ನಂತರ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.
322. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿತಗೊಳಿಸಲು 13,139 ಕೋಟಿ ರೂ. ವೆಚ್ಚದಲ್ಲಿ 288 ಕಿ.ಮೀ. ಉದ್ದದ Satellite Town Ring Road ಅನ್ನು ನಿರ್ಮಿಸಲು ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ. ಈ ಯೋಜನೆಗೆ ಭೂಸ್ವಾಧೀನದ ಶೇ.30ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಲು ಒಪ್ಪಿಗೆ ನೀಡಲಾಗಿದೆ.
323. ಬೆಂಗಳೂರು ನಿವಾಸಿಗಳ ಬಹುದಿನಗಳ ಬೇಡಿಕೆಯಾದ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ (BSRP) ರಾಜ್ಯ ಸರ್ಕಾರ ಮತ್ತು ರೈಲ್ವೆ ಮಂತ್ರಾಲಯವು 15,767 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಹಸಿರು ನಿಶಾನೆ ನೀಡಿವೆ. ಈಗಾಗಲೇ ಮೊದಲನೇ ಹಂತದ ಕಾಮಗಾರಿಗಳು ಪ್ರಗತಿಯಲ್ಲಿದ್ದು,
2024-25ನೇ ವರ್ಷದಲ್ಲಿ ಯೋಜನೆಯ ಹಂತ-1ನ್ನು ಪೂರ್ಣಗೊಳಿಸಲಾಗುವುದು. ಈ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ 1,350 ಕೋಟಿ ರೂ. ಗಳು ಹಾಗೂ ರಾಜ್ಯ ಸರ್ಕಾರದಿಂದ 1,000 ಕೋಟಿ ರೂ. ಗಳ ಅನುದಾನ ಒದಗಿಸಲಾಗುವುದು.
324. ಬೆಂಗಳೂರು ಉಪನಗರ ರೈಲು ಯೋಜನೆಯ ಚಿಕ್ಕಬಾಣಾವರ ಮತ್ತು ಬೈಯಪ್ಪನಹಳ್ಳಿ ನಡುವಿನ ಕಾರಿಡಾರ್-2ರ ವಯಾ-ಡಕ್ಟ್ ಕಾಮಗಾರಿಗಳಿಗೆ 860 ಕೋಟಿ ರೂ. ಮೊತ್ತಕ್ಕೆ ಕಾರ್ಯಾದೇಶ ನೀಡಿದ್ದು, ಕಾಮಗಾರಿಗಳು ಪ್ರಾರಂಭವಾಗಿದೆ.
325. ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಸಾರಿಗೆ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಹಲವಾರು ಸಂಸ್ಥೆಗಳ ಕಾರ್ಯಾಚರಣೆಯನ್ನು ಸಮನ್ವಯಿಸಲು ಉನ್ನತಾಧಿಕಾರದ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರವನ್ನು ರಚಿಸಲಾಗಿದೆ.
326. ಹವಾಮಾನ ಬದಲಾವಣೆಯ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಬೆಂಗಳೂರಿನಲ್ಲಿ ಪ್ರವಾಹವನ್ನು ನಿಯಂತ್ರಿಸಲು 3,000 ಕೋಟಿ ರೂ. ಗಳ ಯೋಜನೆಯನ್ನು ವಿಶ್ವಬ್ಯಾಂಕ್‌ನ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯಡಿಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲಾ ಕೆರೆಗಳಿಗೆ
Sluice Gateಗಳನ್ನು ಅಳವಡಿಸಲಾಗುವುದು. ಇದರಿಂದ ನೀರಿನ ಹರಿವಿನ ವೇಗ ಮತ್ತು ಪ್ರಮಾಣವನ್ನು ನಿಯಂತ್ರಿಸಲು ಅನುಕೂಲವಾಗುವುದು.
327. ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದ ಕಾಮಗಾರಿಗಳನ್ನು 5,550 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಜೈಕಾ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ತೆಗೆದುಕೊಂಡಿದ್ದು, ಎಲ್ಲಾ ಕಾಮಗಾರಿಗಳು 2023-24ನೇ ಸಾಲಿನಲ್ಲಿ ಪೂರ್ಣ ಗೊಳಿಸಲಾಗುವುದು. 775 ಎಂ.ಎಲ್.ಡಿ ಸಾಮರ್ಥ್ಯ ಹೊಂದಿರುವ ಈ ಯೋಜನೆಯನ್ನು ಪೂರ್ಣಗೊಳಿಸುವುದರಿಂದ ನಗರದ 50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ನೆರವಾಗಲಿದೆ.
328. ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಯೋಜನೆಯ ಎರಡನೇ ಹಂತವನ್ನು ಅನುಷ್ಠಾನಗೊಳಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ರಾಜ್ಯ ಸರ್ಕಾರದ ವತಿಯಿಂದ 200 ಕೋಟಿ ರೂ. ಆರ್ಥಿಕ ನೆರವು ನೀಡಲಾಗುವುದು.
329. ಪ್ರಸ್ತುತ ಬೆಂಗಳೂರು ನಗರದಲ್ಲಿ 1,850 ಎಂ.ಎಲ್.ಡಿ. ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ 1,500 ಎಂ.ಎಲ್.ಡಿ. ತ್ಯಾಜ್ಯ ನೀರಿನ ಸಂಸ್ಕರಣಾ ಸಾಮರ್ಥ್ಯವನ್ನು ಸೃಜಿಸಲಾಗಿದೆ. ಹೆಚ್ಚುವರಿಯಾಗಿ 350 ಎಂ.ಎಲ್.ಡಿ. ಸಾಮರ್ಥ್ಯವನ್ನು ಒದಗಿಸುವುದರೊಂದಿಗೆ ಸಂಪೂರ್ಣ ತ್ಯಾಜ್ಯ ನೀರನ್ನು ಸಂಸ್ಕರಿಸಲಾಗುವುದು.
330. ಮೆಗಾಸಿಟಿ ರಿವಾಲ್ವಿಂಗ್ ನಿಧಿಯಡಿ ದಿನಂಪ್ರತಿ ಒಟ್ಟು 440 ದಶಲಕ್ಷ ಲೀಟರ್ ತ್ಯಾಜ್ಯನೀರಿನ ಸಂಸ್ಕರಣಾ ಸಾಮರ್ಥ್ಯದ ನಾಲ್ಕು ಹೊಸ ಘಟಕಗಳ ಕಾಮಗಾರಿಗಳನ್ನು 1,200 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲಾಗಿದೆ.
331. ಬೆಂಗಳೂರು ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಒಂದೇ ವಾಹನದಲ್ಲಿ ಹಸಿ ಕಸ ಹಾಗೂ ಒಣ ಕಸ ಸಂಗ್ರಹಿಸುವ ವಿನ್ಯಾಸದ ಆಟೋ ಟಿಪ್ಪರುಗಳು ಹಾಗೂ ಕಾಂಪಾಕ್ಟರುಗಳು ಕಾರ್ಯಾಚರಣೆ ಮಾಡಲಿವೆ. ಆಯಾ ವಾರ್ಡ್‌ಗಳಲ್ಲಿಯೇ ತ್ಯಾಜ್ಯ ಸಂಸ್ಕರಣೆ ಮಾಡಲು ಪ್ರತಿ ವಾರ್ಡ್‌ಗೆ ಒಂದರಂತೆ ಆಧುನಿಕ ತಂತ್ರಜ್ಞಾನ ಆಧಾರಿತ ವಾಸನೆರಹಿತ ತ್ಯಾಜ್ಯ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
332. ವಾಣಿಜ್ಯ ಮಳಿಗೆಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಸೇರಿದಂತೆ ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮ ಹಂತದಲ್ಲಿಯೇ ತ್ಯಾಜ್ಯವನ್ನು ಸಂಸ್ಕರಿಸುವುದನ್ನು ಕಡ್ಡಾಯಗೊಳಿಸುವ ಮೂಲಕ ಸ್ಥಳೀಯವಾಗಿಯೇ ತ್ಯಾಜ್ಯ ಸಂಸ್ಕರಣೆಗೆ ಒತ್ತು ನೀಡಲಾಗುವುದು.
333. ಬೆಂಗಳೂರಿನಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ದೊರಕಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಉದ್ದೇಶಕ್ಕಾಗಿ 2022-23 ನೇ ಸಾಲಿನಲ್ಲಿ 243 ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್ (Smart Virtual Clinic) ಗಳನ್ನು ಅನುಮೋದಿಸಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ 50 ಡಯಾಲಿಸಿಸ್ ಹಾಸಿಗೆಗಳು ಮತ್ತು 300 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಮಹಾನಗರದ ಆರೋಗ್ಯ ಆಡಳಿತ ವ್ಯವಸ್ಥೆಯನ್ನು ʻಬೆಂಗಳೂರು ಹೆಲ್ತ್ ಸಿಸ್ಟಮ್ಸ್ʼ ಎಂದು ಪುನರ್ ರಚನೆ ಮಾಡಲು ಉದ್ದೇಶಿಸಲಾಗಿದೆ.
334. 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿದ್ದ
20 ಬೆಂಗಳೂರು ಪಬ್ಲಿಕ್ ಶಾಲೆಗಳನ್ನು ಕಾರ್ಯಗತಗೊಳಿಸಲಾಗಿದೆ. ಮುಂದುವರೆದು, ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗಾಗಿ 180 ಕೋಟಿ ರೂ. ಗಳ ವೆಚ್ಚದಲ್ಲಿ ಯೋಜನೆಗಳನ್ನು ತಯಾರಿಸಿದ್ದು, ಸದರಿ ಕಾಮಗಾರಿಗಳನ್ನು 2023-24 ನೇ ಸಾಲಿನಲ್ಲಿ ಪೂರ್ಣ ಗೊಳಿಸಲಾಗುವುದು.
335. ಬೆಂಗಳೂರಿನಲ್ಲಿ 2022-23 ರವರೆಗೆ, ಪ್ರತಿ ವರ್ಷ ಸುಮಾರು
10 ಲಕ್ಷ ಸಸಿಗಳನ್ನು ನೆಡಲಾಗಿದೆ. 2023-24 ರಿಂದ ಇದನ್ನು ವರ್ಷಕ್ಕೆ 15 ಲಕ್ಷ ಸಸಿಗಳಿಗೆ ಹೆಚ್ಚಿಸಲಾಗುವುದು ಮತ್ತು ಅರಣ್ಯ ಇಲಾಖೆಯ ಸಹಕಾರದೊಂದಿಗೆ 3 ಹೊಸ ಹೈಟೆಕ್ ನರ್ಸರಿಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.
336. ಬಿಬಿಎಂಪಿ ಆಸ್ತಿಗಳ ಒತ್ತುವರಿ ತಡೆಗಟ್ಟಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು 35 ಕೋಟಿ ರೂ. ವೆಚ್ಚದಲ್ಲಿ ಬೇಲಿ ನಿರ್ಮಾಣ, ಬೋರ್ಡ್‌ಗಳ ಅಳವಡಿಕೆ ಮತ್ತು GPS ತಂತ್ರಾಂಶದ ಮುಖಾಂತರ ಕಣ್ಗಾವಲು ಕ್ರಮ ಕೈಗೊಳ್ಳಲಾಗುವುದು.
337. ಸಮಾಜದ ದುರ್ಬಲ ವರ್ಗದವರಲ್ಲಿ ಅದರಲ್ಲೂ ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ ʻThe Safe City Projectʼ ಅನ್ನು ಸಮರೋಪಾದಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ 1,640 ಸ್ಥಳಗಳಲ್ಲಿ 4,100 ಕ್ಯಾಮರಾಗಳನ್ನು ಈಗಾಗಲೇ ಅಳವಡಿಸಲಾಗಿದ್ದು, ಈ ಕ್ಯಾಮರಾಗಳನ್ನು Integrated Control and Command Centre ಗೆ ಸಂಪರ್ಕ ಕಲ್ಪಿಸಿ ಭದ್ರತಾ ಕ್ರಮಗಳ ಮೇಲೆ ನಿಗಾವಹಿಸಲಾಗುತ್ತಿದೆ. ಈ ಯೋಜನೆಯನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸುವ ಸಲುವಾಗಿ 261 ಕೋಟಿ ರೂ. ಅನುದಾನವನ್ನು ನೀಡಲಾಗುವುದು.
338. ಬೆಂಗಳೂರು ಮಹಾನಗರದ ಮಾರುಕಟ್ಟೆಗಳು, ಬೃಹತ್ ವಾಣಿಜ್ಯ ಮಳಿಗೆಗಳು ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ ʻShe Toiletʼ ಗಳನ್ನು ನಿರ್ಮಿಸಲಾಗುವುದು. ಈ ಸಂಕೀರ್ಣದಲ್ಲಿ ಶೌಚಾಲಯಗಳು, ಫೀಡಿಂಗ್ ರೂಂಗಳು, ಮೊಬೈಲ್ ಚಾರ್ಜಿಂಗ್, ತುರ್ತು SOS ಸೌಲಭ್ಯಗಳು ಇತ್ಯಾದಿಯನ್ನು ಒಳಗೊಂಡಂತೆ, ಆಧುನಿಕ ವಿನ್ಯಾಸದೊಂದಿಗೆ 50 ಕೋಟಿ ರೂ. ಗಳಲ್ಲಿ ನಿರ್ಮಿಸಲಾಗುವುದು.
339. ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ 2023-24ನೇ ಸಾಲಿಗೆ 9,698 ಕೋಟಿ ರೂ. ಗಳ ಅನುದಾನ ಒದಗಿಸಿದೆ.
Nimma Suddi > Politics News > ಬೆಂಗಳೂರು ಸಮಗ್ರ ಅಭಿವೃದ್ಧಿ
ಬೆಂಗಳೂರು ಸಮಗ್ರ ಅಭಿವೃದ್ಧಿ
Nimma Suddi Desk.17/02/2023
posted on
Leave a reply