ನಿಮ್ಮ ಸುದ್ದಿ ವಿಜಯಪುರ
ಬೆಳಗಾವಿಯ ಒಂದಿಂಚೂ ನೆಲ ಬಿಡುವ ಮಾತೇ ಇಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿಯಲ್ಲಿ ಬೋರಿ ಹಳ್ಳದ ಬ್ಯಾರೇಜ್ ನಿರ್ಮಾಣಕ್ಕೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಒಕ್ಕೂಟ ವ್ಯವಸ್ಥೆ. ಸಿಎಂ ಆದವರಿಗೆ ಒಕ್ಕೂಟ ವ್ಯವಸ್ಥೆಯ ಪ್ರಜ್ಞೆ ಇರಬೇಕು. ಉದ್ಧಟತನದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಎಚ್ಚಚರಿಸಿದರು.
ಸಂವಿಧಾನದ ಚೌಕಟ್ಟಿನಲ್ಲಿ ಸಿಎಂ ಆದವರು ಮಾತನಾಡಬೇಕು ಎಂದು ಬುದ್ಧಿವಾದ ಹೇಳಿದರು.
ದೇಶದಲ್ಲಿ ಎಲ್ಲ ಭಾಷೆ ಕಲಿತು ಮಾತನಾಡಬೇಕು. ಹಾದಿ-ಬೀದಿಯಲ್ಲಿ ನಿಂತು ಮಾತನಾಡುವುದು ಸರಿಯಲ್ಲ.
ನಮ್ಮ ನೆಲ-ಜಲ ಪ್ರಶ್ನೆ ಬಂದಾಗ ರಾಜಿ ಪ್ರಶ್ನೆಯೇ ಇಲ್ಲ. ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದಾಗ ಮರಾಠಿಗರು ತುಂಬಾ ಸಹಕಾರದಿಂದ ಸಹೋದರರಂತೆ ಕನ್ನಡಾಂಬೆ ಹಬ್ಬವನ್ನು ಆಚರಿಸಿದ್ದರು ಎಂದು ಕಾರಜೋಳ ತಿಳಿಸಿದರು.
ಸಿದ್ದರಾಮಯ್ಯ ಬಿಜೆಪಿ ವಕ್ತಾರ ಅಲ್ಲ
ಏಪ್ರಿಲ್ ನಲ್ಲಿ ಸಿಎಂ ಬದಲಾವಣೆ ಆಗುತ್ತದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಏನು ಬಿಜೆಪಿ ವಕ್ತಾರರೇನು? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ, ಅದು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.
ಯತ್ನಾಳರ ಸಿಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.