ಮುಂಬೈ: ಶಿವಸೇನೆ (ಏಕನಾಥ್ ಶಿಂಧೆ) ಬಣದ ನಾಯಕ ಮಹೇಶ್ ಗಾಯಕ್ವಾಡ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದಲ್ಲಿ ಭಾರತೀಯ ಜನತಾ ಪಕ್ಷದ ಶಾಸಕ ಗಣಪತ್ ಗಾಯಕ್ವಾಡ್ ಅವರನ್ನು ಬಂಧಿಸಲಾಗಿದೆ.
ಥಾಣೆಯ ಉಲ್ಲಾಸನಗರದ ಹಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಗಣಪತ್ ಗಾಯಕ್ವಾಡ್ ಬಂಧಿಸಲಾಗಿದ್ದು, ತಡರಾತ್ರಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಟ್ಟು 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಶಾಸಕ ಸೇರಿದಂತೆ 3 ಮಂದಿ ಬಂಧಿಸಲಾಗಿದ್ದು, ಉಳಿದ 3 ಮಂದಿ ಸದ್ಯ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹೇಶ್ ಬೆಂಬಲಿಗರು ನನ್ನ ಮಗನ ಮೇಲೆ ಅನುಚಿತವಾಗಿ ವರ್ತಿಸಿದ್ದು, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದೆ ಎಂದು ಗಾಯಕ್ವಾಡ್ ಸ್ಪಷ್ಟನೆ ನೀಡಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಹೇಶ್ ಗಾಯಕವಾಡ್ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ರಸ್ತೆಗಳಲ್ಲಿ ಜಮಾಯಿಸಿದ್ದರು.
ಥಾಣೆಯ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಆ ಪ್ರದೇಶದಲ್ಲಿ ಗಣನೀಯ ಪ್ರಭಾವ ಹೊಂದಿದ್ದು, ಮುಂಬೈನಿಂದ ಸುಮಾರು 40 ಕಿಮೀ ದೂರದಲ್ಲಿರುವ ಕಲ್ಯಾಣ್‌ನ ಕಲ್ಯಾಣ್ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಅವರ ಪಕ್ಷವು ಮಹಾರಾಷ್ಟ್ರ ಸರ್ಕಾರದಲ್ಲಿ ಶಿಂಧೆ ಬಣದ ಶಿವ ಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.