ನಿಮ್ಮ ಸುದ್ದಿ ವಿಜಯಪುರ
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಮ್ಮನ್ನೇ ಪದಚ್ಯುತಗೊಳಿಸಲು ಯತ್ನಿಸಿದವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದು, ಸಂಕ್ರಾಂತಿ ನಂತರ ಸಿಎಂ ಸ್ಥಾನದಿಂದ ಪದಚ್ಯುತಿ ಹೊಂದುತ್ತಾರೆ ಎಂದು ವಿಜಯಪುರ ಶಾಸಕ ಯತ್ನಾಳ್ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.
ನೂತನ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವ ಮೂವರು ಈ ಹಿಂದೆ ತಮ್ಮ ಬಳಿ ಬಂದು ಬಿಎಸ್‌ವೈ ಅವರನ್ನು ಪದಚ್ಯುತಿಗೊಳಿಸಲು ಬೆಂಬಲ ಕೋರಿದ್ದರು. ನಾವೆಲ್ಲರೂ ಕೂಡಿ ಸಿಎಂ ಯಡಿಯೂರಪ್ಪ ಅವರನ್ನು ಕೆಳಗಿಳಿಸೋಣ ಎಂದಿದ್ದರು. ಅದಕ್ಕಾಗಿ ಹಣ ಖರ್ಚು ಮಾಡಲು ಸಿದ್ಧ ಎಂದೂ ಹೇಳಿದ್ದರು. ಅವರ ಮಾತು ಕೇಳಿ ನನಗೆ ಆಶ್ಚರ್ಯವಾಗಿತ್ತು. ಆದರೆ, ಆಗ ನಾನು ಅದಕ್ಕೆ ಸೊಪ್ಪು ಹಾಕಲಿಲ್ಲ ಎಂದು ಸಚಿವ ಸ್ಥಾನ ಗಿಟ್ಟಿಸಿಕೊಂಡವರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.
ಕೆಲ ಶಾಸಕರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಿಡಿ ತೋರಿಸಿ ಹೆದರಿಸಿ ಮಂತ್ರಿ ಸ್ಥಾನ ಪಡೆದುಕೊಂಡರೆ ಕೆಲವರು ಹಣ ನೀಡಿ ಸಚಿವರಾಗಿದ್ದಾರೆ ಎಂದು ಆರೋಪಿಸಿದ ಶಾಸಕ ಯತ್ನಾಳ್, ಸಿಎಂ ಅವರೂ ಸಹ ಹಣದ ಆಮಿಷಕ್ಕೆ ಒಳಗಾಗಿದ್ದಾರೆ. ಈ ಮೂಲಕ ಲಿಂಗಾಯತ ವೀರಶೈವ ಸಮಾಜದ ಮರ್ಯಾದೆ ಮಣ್ಣು ಪಾಲು ಮಾಡಿದ್ದಾರೆ. ಸಿಎಂಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲು ಎಂದು ಸವಾಲು ಹಾಕಿದರು.
ವೀರಶೈವ ಲಿಂಗಾಯತ ಮಠಗಳಿಗೆ ಕೋಟ್ಯಂತರ ರೂ. ಹಣ ನೀಡಿರುವ ಸಿಎಂ ಬಿಎಸ್‌ವೈ ಒಂದು ವೇಳೆ ತಮ್ಮನ್ನು ಸಿಎಂ ಹುದ್ದೆಯಿಂದ ಹೈಕಮಾಂಡ್ ಪದಚ್ಯುತಗೊಳಿಸಿದರೆ, ಕೇಂದ್ರದ ವಿರುದ್ಧ ಬಂಡೇಳುವಂತೆ ಮಠಾಧೀಶರಿಗೆ ಹಣ ನೀಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಕುಟುಂಬ ರಾಜಕಾರಣವನ್ನು ತೀವ್ರವಾಗಿ ವಿರೋಧಿಸುತ್ತಾರೆ. ಹಾಗಾಗಿ ಕುಟುಂಬ ರಾಜಕಾರಣ ನಿರ್ಮೂಲನೆ ಮಾಡುವದಾದರೆ, ಮೊದಲು ಬಿ.ಎಸ್. ಯಡಿಯೂರಪ್ಪ ಕುಟುಂಬದಿಂದಲೇ ಆರಂಭಿಸಲಿ ಎಂದು ತಿರುಗೇಟು ನೀಡಿದರು.