ನಗರದ ಪ್ರಮುಖ ರಸ್ತೆಗಳಲ್ಲಿ ದೂರದ ಬಳ್ಳಾರಿ, ಚಿತ್ರದುರ್ಗ ಹಾಗೂ ದಾವಣಗೆರೆಯಿಂದ ಬಂದಂತಹ ಹತ್ತಾರು ಕುಟುಂಬಗಳು ಕಡ್ಡಿ ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿ ಮಾರಾಟದಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಬಳ್ಳಾರಿ, ಹಾವೇರಿ, ಚಿತ್ರದುರ್ಗ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ಹಲವು ಕಡೆಗಳಲ್ಲಿನ ರೈತರು ಕ್ವಿಂಟಾಲ್‌ಗಟ್ಟಲೇ ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದು, ಮುಕ್ತ ಮಾರುಕಟ್ಟೆಯಲ್ಲಿ ದರ ಕಡಿಮೆ ಸಿಗುವ ಕಾರಣ ರೈತರು ಹಾಗೂ ವ್ಯಾಪಾರಿಗಳು ಈ ತಾವು ಬೆಳೆದ, ಖರೀದಿಸಿದ ಮೆಣಸಿನಕಾಯಿಯನ್ನು ಪ್ರತಿವರ್ಷ ತಂದು ಮಾರಾಟ ಮಾಡುವುದು ಸಾಮಾನ್ಯ.
ನಗರದ ರೇಷ್ಮೆ ಮಾರುಕಟ್ಟೆ, ರಿಲಯನ್ಸ್ ಪೆಟ್ರೋಲ್ ಬಂಕ್ ಮುಂಭಾಗ, ರಾಜಾ ಕೆಂಪೆಗೌಡ ಬಡಾವಣೆ, ಮಂಗಳವಾರಪೇಟೆ, ಕುವೆಂಪುನಗರ ಸೇರಿದಂತೆ ಹಲವು ಕಡೆಗಳಲ್ಲಿ ವ್ಯಾಪಾರಿಗಳು ಈ ಮೆಣಸಿನಕಾಯಿಯನ್ನು ಮಾರಾಟ ಮಾಡುತ್ತಿದ್ದು, ಸ್ಥಳೀಯ ಅಂಗಡಿಗಳಿಗಿಂತಲೂ ದರ ಕಡಿಮೆ ಇರುವ ಕಾರಣ ಸಾರ್ವಜನಿಕರು ಬ್ಯಾಡಗಿ ಮೆಣಸಿನಕಾಯಿ ಖರೀದಿಗೆ ಮುಗಿಬಿದ್ದಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಕಾರಣ ಇಲ್ಲಿ ತಂದು ಮಾರಾಟ ಮಾಡುವುದಕ್ಕೆ ವ್ಯಾಪಾರಿಗಳು ಹೆಚ್ಚು ಉತ್ಸುಕರಾಗಿದ್ದಾರೆ.ಬ್ಯಾಡಗಿ, ಕಡ್ಡಿ ಬ್ಯಾಡಗಿ ಜತೆಗೆ ಗುಂಟೂರು ಮೆಣಸಿನಕಾಯಿ ಇಲ್ಲಿತಂದು ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಾರಿಗಳನ್ನು ಪ್ರಶ್ನಿಸಿದರೆ, ಸಂಕ್ರಾಂತಿ ನಂತರ ಹಬ್ಬಗಳ ಸೀಸನ್ ಶುರುವಾಗಲಿದ್ದು, ಈ ಸಮಯದಲ್ಲಿ ಮೆಣಸಿನಕಾಯಿ ಖರೀದಿ ಸಹ ಜೋರಾಗಿರುತ್ತದೆ. ಹಾಗಾಗಿ ಪ್ರತಿ ವರ್ಷ ಇಲ್ಲಿಗೆ ಬಂದು ಮಾರಾಟ ಮಾಡುವುದಾಗಿ ತಿಳಿಸುತ್ತಾರೆ.