ಬೆಂಗಳೂರು: ಕೋಮುವಾದಿ ಶಕ್ತಿಗಳ ಹುಟ್ಟಡಗಿಸಲು ನಮ್ಮ ಸರ್ಕಾರ ಸರ್ವ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗಣರಾಜ್ಯೋತ್ಸವದ ಸಂದರ್ಭ ನೀಡಿದ ಸಂದೇಶದಲ್ಲಿ ಅವರು, ಕೋಮುವಾದ ಆಂತಕ ಸೃಷ್ಟಿಸಿ, ನಮ್ಮ ನಡೆ ಅಭಿವೃದ್ಧಿಯ ಕಡೆಗೆ ಸಾಗುತ್ತಿದ್ದರೂ ನಮ್ಮ ಕನಸಿನ ಭಾರತದ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ ಎನ್ನುವುದನ್ನು ವಿಷಾದದಿಂದಲೇ ಒಪ್ಪಬೇಕಾಗಿದೆ. ಅಭಿವೃದ್ಧಿಯ ದಾರಿಯಲ್ಲಿ ಹೊಸ ಸವಾಲುಗಳು ಎದುರಾಗಿವೆ ಎಂದು ಹೇಳಿದರು.
ಮುಖ್ಯವಾಗಿ ಇತ್ತೀಚೆಗೆ ಹೆಡೆ ಎತ್ತಿರುವ ಕೋಮುವಾದ, ನಮ್ಮ ಜಾತ್ಯತೀತ ಸಮಾಜಕ್ಕೆ ಅಪಾಯವನ್ನುಂಟು ಮಾಡುವ ಆತಂಕವನ್ನು ಅನುಭವಿಸುತ್ತಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರು ನೀಡಿರುವ ಜನಮತದಲ್ಲಿ ಸಂವಿಧಾನದ ಆಶಯವಾದ ಜಾತ್ಯತೀತ ಸಮಾಜದ ರಕ್ಷಣೆಯ ಸಂದೇಶವೂ ಇದೆ ಎನ್ನುವುದನ್ನು ನಮ್ಮ ಸರ್ಕಾರ ಅರ್ಥಮಾಡಿಕೊಂಡಿದೆ ಎಂದರು.
ನಮ್ಮ ಸರ್ಕಾರ ಕೋಮುವಾದಿ ಶಕ್ತಿಗಳ ಹುಟ್ಟಡಗಿಸಲು ಸರ್ವ ಸನ್ನದ್ಧವಾಗಿದೆ. ಸಮಾಜವನ್ನು ಧರ್ಮಗಳ ಆಧಾರದಲ್ಲಿ ವಿಭಜಿಸುವ ಹುನ್ನಾರಕ್ಕೆ ಜನತೆ ಬಲಿಯಾಗಬಾರದು ಎಂದು ವಿವರಿಸಿದರು.