ತಿಪಟೂರು: ರಾಜ್ಯದ ಏಳು ಜಿಲ್ಲೆಗಳಲ್ಲಿ ಫೆ. 5ರಂದು ಪ್ರಾರಂಭವಾದ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ಕೇವಲ ನಾಲ್ಕೇ ದಿನಗಳಲ್ಲಿ ರೈತರ ನೋಂದಣಿ ಪ್ರಕ್ರಿಯೆ ಶೇ. 84ರಷ್ಟು ಮುಗಿದಿದ್ದು, ಶುಕ್ರವಾರ ಇನ್ನುಳಿದ ಶೇ. 16ರಷ್ಟು ನೋಂದಣಿ ಮುಕ್ತಾಯವಾಗಿ ಕೊಬ್ಬರಿ ನೋಂದಣಿಗೆ ತೆರೆ ಬೀಳುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿದು ಬಂದಿದೆ.
ಗುರುವಾರ ಒಂದೇ ದಿನ 10,671 ರೈತರ ಒಟ್ಟು 1,42,487 ಕ್ವಿಂಟಾಲ್ ಕೊಬ್ಬರಿ ನೋಂದಣಿಯಾಗಿದ್ದು, ಈವರೆಗೂ ಒಟ್ಟು 38,581 ರೈತರ 5,26,227 ಕ್ವಿಂಟಾಲ್ ಕೊಬ್ಬರಿ ರಾಜ್ಯಾದ್ಯಂತ ನಾಫೆಡ್ ಕೇಂದ್ರಗಳಲ್ಲಿ ನೋಂದಣಿಯಾಗಿದೆ. ಕೇಂದ್ರ ಸರಕಾರ ಸೂಚನೆಯಂತೆ ರಾಜ್ಯದ ಕೊಬ್ಬರಿ ಬೆಳೆಯುವ ಏಳು ಜಿಲ್ಲೆಗಳಲ್ಲಿ ನಾಫೆಡ್ ಮೂಲಕ ರೈತರಿಂದ 62,500 ಮೆಟ್ರಿಕ್ ಟನ್ ಅಂದರೆ 6,25,000 ಕ್ವಿಂಟಾಲ್ ಕೊಬ್ಬರಿ ಮಾತ್ರ ಖರೀದಿಸಲು ಆದೇಶ ಇರುವುದರಿಂದ ಶುಕ್ರವಾರ 98,773 ಕ್ವಿಂಟಾಲ್ ಕೊಬ್ಬರಿ ಮಾತ್ರ ನೋಂದಣಿಗೆ ಅವಕಾಶವಿದೆ. ಈ ಗುರಿ ತಲುಪಿದೊಡನೆಯೇ ಸ್ವಯಂ ಚಾಲಿತವಾಗಿ ನೋಂದಣಿ ಮುಕ್ತಾಯಗೊಳ್ಳಲಿದೆ.
ತಿಪಟೂರಲ್ಲಿ ಹೆಚ್ಚುವರಿ ಐದು ನೋಂದಣಿ ಕೇಂದ್ರ ಸ್ಥಾಪಿಸಿದ್ದರಿಂದ ನೋಂದಣಿ ಪ್ರಕ್ರಿಯೆ ಸ್ವಲ್ಪ ವೇಗ ಪಡೆದುಕೊಂಡಿತು. ಇಷ್ಟಾದರೂ ತಿಪಟೂರು ತಾಲೂಕಿನಲ್ಲಿ ಇದುವರೆಗೂ ಕೇವಲ 2,843 ರೈತರು ಮಾತ್ರ ನಾಫೆಡ್‌ಗೆ ಕೊಬ್ಬರಿ ಬಿಡಲು ನೋಂದಣಿ ಮಾಡಿಕೊಂಡಿದ್ದು,ಸಾವಿರಾರು ರೈತರು ನೋಂದಣಿ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.