ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ
ನಿಮ್ಮ ಸುದ್ದಿ ಬಾಗಲಕೋಟೆ
ಶಿಕ್ಷಣ ಕ್ಷೇತ್ರವನ್ನು ವ್ಯಾಪಾರೀಕರಣ ಮಾಡುತ್ತಿರುವ ಕೆಲವರು ಪ್ರಸಕ್ತ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ನಕಲಿ ಶಿಕ್ಷಕರನ್ನು ಮತದಾರರನ್ನಾಗಿಸಿದ್ದು ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಚಿಂತನೆ ಇದೆ ಎಂದು ವಾಯವ್ಯ ಶಿಕ್ಷಕರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸಪ್ಪ ಮನಿಗಾರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಅವರು ವಾಮಮಾರ್ಗದ ಮೂಲಕ ಗೆಲುವು ಸಾಧಿಸಲು ನಕಲಿ ಮತದಾರರನ್ನು ಮತಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಾರೆ. ಸೇರ್ಪಡೆಗೊಂಡ ನಕಲಿ ಮತದಾರರು ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಎಚ್ಚರಿಸಿದರು.
ಮತಕ್ಷೇತ್ರದಲ್ಲಿ ಅಂದಾಜು ೩ ರಿಂದ ೪ ಸಾವಿರಕ್ಕೂ ಹೆಚ್ಚು ನಕಲಿ ಮತದಾರರಿದ್ದಾರೆ. ಮುಧೋಳದಲ್ಲಿ ತಾವು ಸೇವೆ ಸಲ್ಲಿಸುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ೭ ಜನ ಶಿಕ್ಷಕರಲ್ಲದವರು ಮತದಾರರ ಪಟ್ಟಿಯಲ್ಲಿದ್ದಾರೆ. ಅರುಣ ಶಹಾಪೂರ ತಮ್ಮ ಗೆಲುವಿಗಾಗಿ ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ. ಎರಡು ಬಾರಿ ಪರಿಷತ್ ಸದಸ್ಯರಾಗಿ ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಏನು? ಎಂದು ಪ್ರಶ್ನಿಸಿದ ಬಸಪ್ಪ ಮನಿಗಾರ, ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರಿಗೆ ಶಿಕ್ಷಕರ ಸಮಸ್ಯೆ, ನೋವು, ನಲಿವುಗಳ ಅರಿವೇ ಇಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಂತಿದೆ ಎಂದು ದೂರಿದರು.
ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರಾದವರಿಗೆ ಅವಕಾಶ ದೊರೆಯಬೇಕು. ಈ ನಿಟ್ಟಿನಲ್ಲಿ ೧೨ ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿದ ತಮಗೆ ಈ ಬಾರಿ ಅವಕಾಶ ನೀಡಬೇಕು ಎಂದು ಶಿಕ್ಷಕ ಸಮೂಹದಲ್ಲಿ ವಿನಂತಿಸಿದರು.
ವಿಜಯಕುಮಾರ ಗಂಗಲ್, ಮಹಮ್ಮದ್‌ಆಶಿಪ್ ಪಡೆಗನೂರ, ಶಂಕರಗೌಡ ಪಾಟೀಲ ಇದ್ದರು.