ಕೋವಿಡ್ ನಿರ್ವಹಣೆಯಲ್ಲಿ ಸರಕಾರದ ಮಹತ್ವದ ಕಾರ್ಯ : ಡಿಸಿಎಂ ಕಾರಜೋಳ
ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್-19 ಭೀತಿಯಿಂದ ಇಡೀ ದೇಶವೇ ತಲ್ಲಣಗೊಂಡ ಸಂದರ್ಭದಲ್ಲಿ ನಿರ್ವಹಣೆಯಲ್ಲಿ ಸರಕಾರ ಮಹತ್ವದ ಕಾರ್ಯ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್-19 ನಿಂದ ಇಡೀ ದೇಶವೇ ತಲ್ಲಣಗೊಂಡಿದ್ದು, ಸಂಕಷ್ಟಕ್ಕೆ ಒಳಗಾಗಿ ಸಾವು-ನೋವು ಅನುಭವಿಸಿವೆ. ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ದೇಶದಲ್ಲಿ130 ಕೋಟಿ ಜನಸಂಖ್ಯೆ ಪೈಕಿ ಪ್ರಥಮವಾಗಿ 30 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದರು.
ಕೋವಿಡ್ ಲಸಿಕೆಯನ್ನು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ, ಪೌರ ಕಾರ್ಮಿಕರಿಗೆ, ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಪ್ರಥಮ ಆದ್ಯತೆ ನೀಡುವ ಮೂಲಕ ಪ್ರಧಾನಮಂತ್ರಿಗಳು ಸಾಮಾಜಿಕ ಕಳಕಳಿ ಹೊಂದಿದ್ದಾರೆ ಎಂದರು.
ರಾಜ್ಯ ಸರಕಾರವು ಕೋವಿಡ್-19 ವಿರುದ್ದ ಹೋರಾಟದಲ್ಲಿ ಯಶಸ್ವಿಯಾಗಿದೆ. ಕರ್ನಾಟಕ ರಾಜ್ಯ ಕೋವಿಡ್ ನಿರ್ವಹಣೆಯಲ್ಲಿ ದೇಶಕ್ಕೆ ಮೊದಲ ಸ್ಥಾನದಲ್ಲಿರುವುದಾಗಿ ತಿಳಿಸಿದರು.
ಕೋವಿಡ್ ಲಸಿಕೆ ಖಾಸಗಿಯಾಗಿ ಸಿಗುವ ಲಸಿಕೆಯಾಗಿರುವದಿಲ್ಲ. ಯಾರಾದರೂ ಖಾಸಗಿಯಾಗಿ ಕೋವಿಡ್ ಲಸಿಕೆ ನೀಡಲು ಬಂದಲ್ಲಿ ತೆಗೆದುಕೊಳ್ಳಬಾರದು. ಇದು ಸರಕಾರದಿಂದ ಮಾತ್ರ ನೀಡುವ ಲಸಿಕೆಯಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಮಾತನಾಡಿದರು. ಮೆಟಗುಡ್ಡದ ಪ್ರಾಥಮಿಕ ಆರೋಗ್ಯ ಇಲಾಖೆಯ ಸಿಬ್ಬಂದಿ ಸಚೀನ ಶ್ಯಾಮಸುಂದರ ಕೋವಿಡ್ ಲಸಿಕೆಯನ್ನು ಪಡೆದರು.
ಕಾರ್ಯಕ್ರಮದಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿ.ಪಂ ಸದಸ್ಯರಾದ ಭೀಮನಗೌಡ ಪಾಟೀಲ, ಕವಿತಾ ತಿಮ್ಮಾಪೂರ, ತಾ.ಪಂ ಸದಸ್ಯೆ ಶಾಂತಾ ಮಾಸರಡ್ಡಿ, ಗ್ರಾಮದ ಮುಖಂಡರಾದ ಕೆ.ಡಿ.ನಾಯಕ, ಹನಮಂತ ತುಳಸಿಗೇರಿ, ರಾಮಣ್ಣ ತಳೇವಾಡ, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ.ವಿ.ಎಂ.ಮಲಗಾವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.