ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿ ರಾಜ್ಯ ಸರ್ಕಾರವು ‘ವಿಕಾಸ’ ಮಾದರಿಯನ್ನು ಅನುಸರಿಸುತ್ತಿದ್ದರೆ, ಕೇಂದ್ರದ ಬಿಜೆಪಿ ಸರ್ಕಾರವು ‘ವಿನಾಶ’ ಮಾದರಿ ಅನುಸರಿಸುತ್ತಿದೆ ಎಂದು ದಿಲ್ಲಿ ಸಿಎಂ, ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್ ತಿಳಿಸಿದರು.
ವಿರೋಧ ಪಕ್ಷಗಳನ್ನು ತುಳಿಯುತ್ತಿರುವ ಬಿಜೆಪಿ, ವಿಪಕ್ಷಗಳ ಸರ್ಕಾರಗಳನ್ನೇ ಉರುಳಿಸುತ್ತಿದೆ ಎಂದು ಕೇಜ್ರಿವಾಲ್ ಆಪಾದಿಸಿದ್ದು, ದಿಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಅರವಿಂದ ಕೇಜ್ರಿವಾಲ್, ಇತ್ತೀಚೆಗೆ ತಮ್ಮ ಸರ್ಕಾರ ಮಂಡಿಸಿದ 2024-25ನೇ ಸಾಲಿನ ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿ ಅಭ್ಯರ್ಥಿಗಳು ದಿಲ್ಲಿಯಲ್ಲಿ ಕಣಕ್ಕೆ ಇಳಿಯಲಿದ್ದು, ರಾಜ್ಯದ ಎಲ್ಲಾ 7 ಲೋಕಸಭಾ ಸ್ಥಾನಗಳಲ್ಲೂ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.ದಿಲ್ಲಿ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಪ್ರಕಟಿಸಲಾಗಿದ್ದು, ಈ ಯೋಜನೆ ಸಾಕಷ್ಟು ಸುದ್ದಿಯಲ್ಲಿದೆ.
ಪ್ರತಿ ಕುಟುಂಬದ ಎಲ್ಲ ಮಹಿಳೆಯರಿಗೂ ತಿಂಗಳಿಗೆ 1 ಸಾವಿರ ರೂ. ಹಣಕಾಸಿನ ನೆರವು ನೀಡುವ ಯೋಜನೆ ಇದಾಗಿದೆ.ಇದೇ ವೇಳೆ ದಿಲ್ಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಕುರಿತಾಗಿಯೂ ಪ್ರಸ್ತಾಪ ಮಾಡಿದ ಅರವಿಂದ್ ಕೇಜ್ರಿವಾಲ್, ಮುಂದಿನ ವರ್ಷದ ಬಜೆಟ್ ಅನ್ನು ಮನೀಶ್ ಸಿಸೋಡಿಯಾ ಅವರೇ ಮಂಡಿಸಲಿದ್ದಾರೆ ಎಂದು ತಿಳಿಸಿದರು.