ಹೊಸದಿಲ್ಲಿ: ದಿಲ್ಲಿ ಲಿಕ್ಕರ್ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕೇಜ್ರಿವಾಲ್ ಅವರಿಗೆ ಈ ಹಂತದಲ್ಲಿ ಯಾವುದೇ ಕಠಿಣ ಕ್ರಮದಿಂದ ಮಧ್ಯಂತರ ರಕ್ಷಣೆ ನೀಡುವ ಆದೇಶ ಹೊರಡಿಸಲು ದಿಲ್ಲಿ ಹೈಕೋರ್ಟ್ ನಿರಾಕರಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಜಾರಿ ನಿರ್ದೇಶನಾಲಯವು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೀಡಿದ್ದ ಸಮನ್ಸ್‌ಗಳಿಂದ ಮಧ್ಯಂತರ ಪರಿಹಾರ ನೀಡುವಂತೆ ಕೋರಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ದಿಲ್ಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಲೋಕಸಭೆ ಚುನಾವಣೆ ಸಮೀಪದಲ್ಲಿ ಎಎಪಿ ಸಂಚಾಲಕ ಕೇಜ್ರಿವಾಲ್ ಅವರಿಗೆ ಆಘಾತ ಎದುರಾಗಿದೆ.
ಜಾರಿ ನಿರ್ದೇಶನಾಲಯ ನೀಡಿರುವ ಹಲವು ಸಮನ್ಸ್‌ಗಳಿಗೆ ಸ್ಪಂದಿಸಿದರೆ ಬಂಧನ ಮಾಡದಂತೆ ಭರವಸೆ ನೀಡುವಂತೆ ಕೋರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಬೆಳಿಗ್ಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.
“ನಾವು ಮಧ್ಯಂತರ ರಿಲೀಫ್ ನೀಡಲು ಒಲವು ಹೊಂದಿಲ್ಲ” ಎಂದ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಹಾಗೂ ಮನೋಜ್ ಜೈನ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಈ ಹೊಸ ಮಧ್ಯಂತರ ಅರ್ಜಿ ಕುರಿತು ಪ್ರತಿಕ್ರಿಯೆ ನೀಡುವಂತೆ ಇಡಿಗೆ ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿದೆ.
“ನಾನು ಸಮನ್ಸ್‌ಗಳಿಗೆ ಸಹಕರಿಸಿದರೆ ನನ್ನ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಜಾರಿ ನಿರ್ದೇಶನಾಲಯವು ಕೋರ್ಟ್‌ಗೆ ಭರವಸೆ ನೀಡಬೇಕು” ಎಂದು ತಮ್ಮ ಅರ್ಜಿಯಲ್ಲಿ ಅವರು ಒತ್ತಾಯಿಸಿದ್ದರು ಎಂದು ಮಾಹಿತಿ ಕಂಡು ಬಂದಿದೆ.