ನಿಮ್ಮ ಸುದ್ದಿ ಹುನಗುಂದ
ಆರ್ಥಿಕವಾಗಿ ಹಿಂದುಳಿದ ದೇವಾಂಗ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಸರಕಾರ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಸಮುದಾಯದ ಮುಖಂಡರು ಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ.
ತಾಲೂಕಿನ ಸೂಳೇಬಾವಿಯ ದೇವಾಂಗ ಪರಿಷತ್ ಹಾಗೂ ದೇವಲಮಹರ್ಷಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹುನಗುಂದ ತಹಸೀಲ್ದಾರ್ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.
ಮಂಜುನಾಥ ನೆಮದಿ ಮಾತನಾಡಿ, ರಾಜ್ಯದಲ್ಲಿ ೨೭ ಲಕ್ಷ ಜನಸಂಖ್ಯೆ ಹೊಂದಿದ ದೇವಾಂಗ ಸಮಾಜ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಈ ಹಿಂದೆ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ದೇವಾಂಗ ಮೀಸಲಾತಿ ಇದ್ದು ಅದನ್ನು ರದ್ದುಗೊಳಿಸಲಾಗಿದೆ ಎಂದರು.
ಮಾನ ಕಾಪಾಡುವ ಮೂಲ ನೇಕಾರರಾದ ದೇವಾಂಗ ಸಮಾಜದವರಿಗೆ ಸರಕಾರ ಯಾವುದೇ ಮೀಸಲಾತಿ ಕಲ್ಪಿಸಿಲ್ಲ. ಅನ್ಯ ಸಮಾಜಕ್ಕೆ ನಿಗಮ ಸ್ಥಾಪಿಸಿ ಅನುಕೂಲ ಕಲ್ಪಿಸಿದಂತೆ ದೇವಾಂಗ ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸುವ ಮೂಲಕ ಬಡವರ ಧ್ವನಿಗೆ ಓಗೊಡಬೇಕು ಎಂದು ಆಗ್ರಹಿಸಿದರು.
ರಾಘು ಧೂಪದ, ರಾಜಶೇಖರ ಭಾಪ್ರಿ, ರಮೇಶ ಭಾಪ್ರಿ, ವಾಸಪ್ಪ ಇಜೇರಿ, ಪುಂಡಲೀಕ ಕಟಗೇರಿ, ಬಸವರಾಜ ಹುಲಮನಿ, ರಾಜು ಗುಂಡಮಿ, ನಿಂಗಪ್ಪ ನೆಮದಿ, ರಾಜೇಶ ಭಾಪ್ರಿ, ಪ್ರಭು ಲಾಯದಗುಂದಿ ಇತರರು ಇದ್ದರು.