ನಿರಾಶ್ರಿತರಿಗೆ, ಭಿಕ್ಷುಕರಿಗೆ ಕೋವಿಡ್ ಲಸಿಕೆ
ನಿಮ್ಮ ಸುದ್ದಿ ಬಾಗಲಕೋಟೆ
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಪ್ರಾರಂಭವಾಗಿದ್ದು, ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ಸನ್ನದ್ದರಾಗುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ತಿಳಿಸಿದರು.
ನಗರದ ಯುಕೆಪಿಯ ಸಂಗಮ ಸಭಾಂಣದಲ್ಲಿಂದು ಜರುಗಿದ ಕುಡಿಯುವ ನೀರು, ಕೋವಿಡ್ ಹಾಗೂ ಇತರೆ ಅಭಿವೃದ್ದಿ ಕಾರ್ಯಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲೆಯ ಗಡಿ ಚೆಕ್‍ಪೋಸ್ಟಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಪ್ರತಿದಿನ 4 ಸಾವಿರ ಸ್ಯಾಂಪಲ್ ತೆಗೆದುಕೊಳ್ಳಬೇಕು. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮಾಸ್ಕ ಹಾಕದಿದ್ದಲ್ಲಿ ದಂಡ ಹಾಕಲು ಸೂಚಿಸಿದರು.
ಕೋವಿಡ್ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಈಗಾಗಲೇ 54 ಸಾವಿರ ಡೋಜು ಲಸಿಕೆ ನೀಡಲಾಗಿದೆ. ಲಸಿಕೆ ಪಡೆದವರಲ್ಲಿ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಕಂಡುಬಂದಿರುವದಿಲ್ಲ. ಕೆ.ಎಸ್.ಆರ್.ಟಿ.ಸಿಯ ಎಲ್ಲ ಸಿಬ್ಬಂದಿಗಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ ಯಾವುದೇ ರೀತಿಯ ವಯೋಮಿತಿ ಇರುವದಿಲ್ಲ. ನಿರಾಶ್ರಿತರು, ಭೀಕ್ಷುಕರಿಗೂ ಸಹ ಕೊರೊನಾ ಲಸಿಕೆ ನೀಡಲು ಕ್ರಮವಹಿಸಲು ತಿಳಿಸಿದರು. ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿರುವುದಾಗಿ ಸಭೆಗೆ ತಿಳಿಸಿದರು.
ಬೇಸಿಗೆ ಪ್ರಾರಂಭವಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಹಿಸುವಂತೆ ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದಾಗ ಇಲ್ಲಿಯವರೆಗೆ ಎಲ್ಲಿಯೂ ನೀರಿನ ಸಮಸ್ಯೆ ಕಂಡು ಬಂದಿರುವದಿಲ್ಲ. ಜೂನ್ ತಿಂಗಳವರೆಗೆ ಸಮಸ್ಯೆ ಇರುವದಿಲ್ಲ. ಎಲ್ಲ ತಾಲೂಕಿನ ತಹಶೀಲ್ದಾರರಿಗೆ 50 ಲಕ್ಷ ರೂ.ಗಳ ನೀರಿಗಾಗಿ ನೀಡಲಾಗಿದೆ. ಆರ್‍ಡಿಪಿಆರ್‍ನಲ್ಲಿ ಟ್ಯಾಂಕರ್ ಸರಬುರಾಜಿಗಾಗಿ 80 ಲಕ್ಷ ರೂ.ಗಳ ಅನುದಾನವಿದೆ. ಜಿ.ಎಲ್.ಬಿ.ಸಿ, ಜಿಆರ್‍ಬಿಸಿ, ಎಂಎಲ್‍ಬಿಸಿಯಲ್ಲಿ ನೀರು ಬಿಡುಗಡೆಯಾಗಿದೆ. ಬಾಗಲಕೋಟೆ ನಗರಕ್ಕೂ ನೀರಿನ ಸಮಸ್ಯೆ ಇಲ್ಲವೆಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದರು.
ಜಿ.ಪಂ ಸಿಇಓ ಟಿ.ಭೂಬಾಲನ ಮಾತನಾಡಿ ಜಲಜೀವನ ಮಿಶನ್ ಯೋಜನೆಯಡಿ ಜಿಲ್ಲೆಯ 337 ಹಳ್ಳಿಗಳಲ್ಲಿ ಪ್ರತಿ ಮನೆಗೆ ನೀರು ಕೊಡಲು ಕ್ರಮವಹಿಸಲಾಗುತ್ತಿದೆ. 30 ಬಹುಗ್ರಾಮ ಕುಡಿಯುವ ನೀರಿಯ ಯೋಜನೆಗಳಿಗೂ ಸಹ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು. ಕಲಾದಗಿ ಗ್ರಾಮ ಸ್ಥಳಾಂತರ ಸಮಸ್ಯೆ ಇದ್ದು, ಆರ್‍ಸಿ ಸೆಂಟರಗಳಿಗೆ ಹೋಗಲು ಮನವೊಲಿಸಲಾಗುತ್ತಿದೆ. ಗಿರಿಗಾಂ ಗ್ರಾಮಸ್ಥರಿಗೆ ಬಾಕಿ ಇರುವ ಹಕ್ಕುಪತ್ರ ವಿತರಣೆಗೆ ಕ್ರಮವಹಿಸಲು ಕಂದಾಯ ನಿರೀಕ್ಷಕರಿಗೆ ತಿಳಿಸಿದರು.
ಭೂಮಿ ಯೋಜನೆಯಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದನ್ನು ಕಂಡು ಉಸ್ತುವಾರಿ ಕಾರ್ಯದರ್ಶಿ ಕಳಸದ ಹರ್ಷ ವ್ಯಕ್ತಪಡಿಸಿದರು.
ಮುಳುಗಡೆ ಗ್ರಾಮಗಳಲ್ಲಿ ಯಾವುದೇ ಅಭಿವೃದ್ದಿ ಕಾಮಗಳು ಬೇಡವೆಂದರು. ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.