ಅಮೀನಗಡ ಪಟ್ಟಣ ಪಂಚಾಯಿತಿ
ನಿಮ್ಮ ಸುದ್ದಿ ಬಾಗಲಕೋಟೆ
ಥರಗುಟ್ಟುವ ಚಳಿಯ ಮಧ್ಯೆ ಡಿ.8ರಿಂದ ಜಿಲ್ಲೆಯ ಅಮೀನಗಡ ಪಟ್ಟಣದಲ್ಲಿ ಚುನಾವಣೆ ಕಾವು ಜೋರಾಗಿ ಆರಂಭವಾಗಲಿದೆ.
ಸ್ಥಳೀಯ ಪಟ್ಟಣ ಪಂಚಾಯಿತಿ 16 ಸದಸ್ಯ ಸ್ಥಾನಗಳಿಗೆ ಡಿ.27ರಂದು ಮತದಾನ ನಡೆಯಲಿದ್ದು ಡಿ.8ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ಪಕ್ಷದ ಅಧಾರದಲ್ಲಿ ನಡೆಯುವ ಚುನಾವಣೆಯಲ್ಲಿ ರಾಜಕೀಯ ಪ್ರವೇಶದ ಆರಂಭದ ಮೆಟ್ಟಿಲಾದ ಸ್ಥಳೀಯ ಸಂಸ್ಥೆ ಚುನಾವಣೆ ಎಂದರೆ ಇದು ಕಾರ್ಯಕರ್ತರ ಚುನಾವಣೆ ಎಂದೇ ಬಿಂಬಿಸಲಾಗಿದೆ.
ಹೀಗಾಗಿ ಪ್ರಮುಖ ರಾಷ್ಟಿಯ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷದ ಬಲವರ್ದನೆಗೆ ಸಾಥ್ ನೀಡಲು ಈ ಚುನಾವಣೆಯನ್ನು ಪ್ರತಿಷ್ಠೆಯ ಕಣವನ್ನಾಗಿಸಿಕೊಳ್ಳುತ್ತಾರೆ. ಅದರೊಂದಿಗೆ ವಿಧಾನಸಭೆ ಚುನಾವಣೆಗೆ ಮತಗಳನ್ನು ಹೆಚ್ಚಿಸಿಕೊಳ್ಳಲು ರಾಜಕೀಯ ಮುಖಂಡರಿಗೆ ಇದೊಂದು ಸವಾಲಾಗಿ ಪರಿಣಮಿಸುತ್ತದೆ.
ಪಟ್ಟಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರಕ್ರಿಯೆ ಆರಂಭವಾಗುವುದಕ್ಕೂ ಮುಂಚೆ ಬಿರುಸಿನ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ. ಈಗಾಗಲೆ ಬಿಜೆಪಿ ಪಕ್ಷದಿಂದ ಶಾಸಕ ವೀರಣ್ಣ ಚರಂತಿಮಠ, ಕಾಂಗ್ರೆಸ್‌ನಿAದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಶಾಸಕ ಎಚ್.ವೈ.ಮೇಟಿ ಒಂದು ಸುತ್ತಿನ ಕಾರ್ಯಕರ್ತರ ಸಭೆ ನಡೆಸಿದ್ದಾರೆ.
ಎರಡೂ ಪಕ್ಷದ ಪ್ರಮುಖ ಆಕಾಂಕ್ಷಿಗಳು ಈಗಾಗಲೆ ವಾರ್ಡ್ ಸದಸ್ಯರ ಸಭೆಯೊಂದಿಗೆ ತಮ್ಮ ಅಭಿಪ್ರಾಯ ಸಂಗ್ರಹಿಸುತ್ತಿದ್ದು ಕೆಲವೆಡೆ ಅವಿರೋಧ ಆಯ್ಕೆ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಪಟ್ಟಣ ವಾರ್ಡ್ವೊಂದರಲ್ಲಿ ಈಗಾಗಲೆ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂಬ ಮಾತು ಕೇಳಿ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಅವಿರೋಧವಾಗಿ ಆಯ್ಕೆ ಆಗುತ್ತಾರೆ ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಇದಕ್ಕೆ ಪುಷ್ಟಿ ನೀಡಿದಂತಾಗಿದೆ. ಮತ್ತೊಂದೆಡೆ ಮತ್ತೆರಡು ವಾರ್ಡ್ಗಳಲ್ಲಿನ ದೊಡ್ಡ ಸಮುದಾಯದ ಬಲ ಪಡೆಯುವ ನಿಟ್ಟಿನಲ್ಲಿ ಓಲೈಕೆ ಕಾರ್ಯಗಳು ಮುಂದುವರೆದಿದೆ ಎಂಬ ಮಾತೂ ಸಹ ಕೇಳಿದೆ.
ಈ ಮಧ್ಯೆ ಹಿಂದಿನ ಅವಧಿಯಲ್ಲಿ ಸದಸ್ಯರಾಗಿದ್ದ ಕೆಲವರಿಗೆ ಪಕ್ಷ ಕೈ ಕೊಡುವ ಸಾಧ್ಯತೆ ಅರಿತು ಪಕ್ಷೇತರರಾಗಿ ತಮ್ಮ ಬಲಾಬಲ ಪ್ರದರ್ಶನಕ್ಕೂ ಒಳಗೊಳಗೆ ಸಿದ್ದತೆ ನಡೆಸಿದ್ದಾರೆಂಬುದು ಗುಟ್ಟಾಗಿ ಉಳಿದಿಲ್ಲ. ಇಂತಹ ಎಲ್ಲ ಪ್ರಶ್ನೆಗಳಿಗೆ ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಡಿ.೧೫ರಂದೇ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂಬುದAತೂ ಸತ್ಯದ ಮಾತು.