ನವದೆಹಲಿ: ಸಕಾರಾತ್ಮಕ ಮತ್ತು ನಕಾರಾತ್ಮಕ ಕಾರಣಗಳಿಂದಾಗಿ ಸುದ್ದಿಯಲ್ಲಿರುವ ಕೃತಕ ಬುದ್ಧಿಮತ್ತೆ (ಎಐ) ಬಗ್ಗೆ ಮತ್ತೊಮ್ಮೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಹುಟ್ಟಿದ ಮಕ್ಕಳು ಕೂಡ ಎಐ (ಆಯಿ) ಎನ್ನುತ್ತವೆ ಎಂದು ಲಘುಧಾಟಿಯಲ್ಲಿ ತಿಳಿಸಿದರು.
ದೇಶದ ಲಕ್ಷಾಂತರ ಹೆಣ್ಣು ಮಕ್ಕಳನ್ನು ಬಾಧಿಸುತ್ತಿರುವ ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆ ನೀಡುವುದು ತಮ್ಮ ಮುಂದಿನ ಆದ್ಯತೆ ಎಂದು ಹೇಳಿದ್ದಾರೆ. ಜೊತೆಗೆ ಕೃಷಿ, ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿ ತಂತ್ರ ಜ್ಞಾನದ ಪಾತ್ರ ಪ್ರಮುಖವಾಗಿದ್ದು, ಆ ಕ್ಷೇತ್ರಗಳಲ್ಲಿ ತಮ್ಮ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರತವಾಗಿದೆ ಎಂದರು.
2019ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜತೆ ಮುಕ್ತವಾಗಿ ಹರಟೆ ಹೊಡೆದಿದ್ದ ಮೋದಿ ಅವರು ಇದೀಗ ಭಾರತಕ್ಕೆ ಆಗಮಿಸಿದ್ದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಅವರೊಂದಿಗೆ ಸಂವಾದ ನಡೆಸಿದ್ದಾರೆ. ಕೃತಕ ಬುದ್ದಿಮತ್ತೆ, ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ಕೃಷಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಈ ವೇಳೆ ಮೋದಿ ಈ ವಿಷಯಗಳಿಗೆ ಸಂಬಂಧಿಸಿ ದಂತೆ ಮುಕ್ತವಾಗಿ ಮಾತನಾಡಿದ್ದಾರೆ.
ಕೃತಕ ಬುದ್ಧಿಮತ್ತೆ ಇಂದಿನ ದಿನಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇದರ ಪರಿಣಾಮ ನನ್ನ ಜಿ20 ಶೃಂಗದ ಭಾಷಣ ವನ್ನು ಹಲವು ಭಾಷೆಗಳಿಗೆ ಭಾಷಾಂತರ ಮಾಡಲಾಗಿದೆ. ಚಾಟ್‌ಜಿಪಿಟಿ ಮೂಲಕ ವಿದೇಶಿನಾಯಕರೊಂದಿಗೆ ಸಂವಹನ ನಡೆಸಲು ಸಾಧ್ಯವಾಗಿದೆ. ಆದರೆ ಇದೇ ವೇಳೆ ಡೀಪ್‌ಫೇಕ್ ದುರ್ಬಳಕೆ ಯನ್ನು ತಡೆಗಟ್ಟಲು ಆದರ ಮೂಲವನ್ನು ತೋರಿಸುವಂತಹ ತಂತ್ರಜ್ಞಾನ ತರಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲೂ ಸಹ ಸುಳ್ಳುಸುದ್ದಿ ಹರಡದಂತೆ ತಂತ್ರಜ್ಞಾನದಲ್ಲಿ ಕೆಲವು ಮಾರ್ಪಾಡು ಮಾಡಬೇಕಿದೆ’ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. ಕೆಲವು ವೇಳೆ ನಾನು ಹಾಸ್ಯವಾಗಿ ಹೇಳುತ್ತಿರುತ್ತೇನೆ. ನಮ್ಮ ದೇಶದಲ್ಲಿ ತಾಯಿಯರನ್ನು ‘ಆಯಿ’ ಎಂದು ಕರೆಯುವ ಪದ್ಧತಿ ಇದೆ.ದೇಶದಲ್ಲಿ ಮಕ್ಕಳು ಹುಟ್ಟಿದಾಕ್ಷಣ ಆಡುವ ಮೊದಲ ಮಾತೇ ‘ಆಯಿ’. ಆ ಅರ್ಥದಲ್ಲಿ ಭಾರತದಲ್ಲಿ ಎಐ ಸರ್ವವ್ಯಾಪಿಯಾಗಿದೆ ಎಂದು ಹೇಳಿದರು.