ನವದೆಹಲಿ, ಮಧ್ಯಂತರ ಬಜೆಟ್ಗೆ ಎರಡು ವಾರ ಬಾಕಿ ಇರುವಂತೆಯೇ ಸಾಧ್ಯಾಸಾಧ್ಯತೆಗಳ ಬಗ್ಗೆ ವಿವಿಧ ವರದಿಗಳು ಬರುತ್ತಿದ್ದು, ಪಿಎಂ ಜನ್ ಆರೋಗ್ಯ ಯೋಜನೆಯ ವಿಮಾ ಕವರೇಜ್ ಮಿತಿಯನ್ನು ದ್ವಿಗುಣಗೊಳಿಸಲಿರುವ ಸುದ್ದಿಯೂ ಇದೆ ಎಂದು ತಿಳಿದು ಬಂದಿದೆ.
ಆಯುಷ್ಮಾನ್ ಭಾರತ್ ಹೆಲ್ತ್ ಸ್ಕೀಮ್ನ ವಿಮಾ ಕವರೇಜ್ ಅನ್ನು ವರ್ಷವೊಂದಕ್ಕೆ ಈಗ ಇರುವ 5 ಲಕ್ಷ ರೂ ಮಿತಿಯನ್ನು 10 ಲಕ್ಷ ರೂಗೆ ಏರಿಸುವ ಪ್ರಸ್ತಾಪವೊಂದನ್ನು ಸರ್ಕಾರ ಪರಿಗಣಿಸುತ್ತಿದ್ದು, ಫೆಬ್ರುವರಿ 1ರಂದು ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಬಹುದು. ಇನ್ನೂ ಖುಷಿ ಸುದ್ದಿ ಎಂದರೆ, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳೂ ಸೇರಿದಂತೆ ವಿವಿಧ ಸಮುದಾಯಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಕವರೇಜ್ ವ್ಯಾಪ್ತಿಗೆ ತರಲು ಸರ್ಕಾರ ಚಿಂತಿನೆ ನೆಡಿಸಿದೆ.
ಸದ್ಯ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ ಅನ್ನು ಎಸ್ಸಿ ಎಸ್ಟಿ ಸಮುದಾಯದವರು, ಬುಡಕಟ್ಟು ಸಮುದಾಯದವರು, ಬಿಕ್ಷುಕರು, ದಿವ್ಯಾಂಗರುವ ಕುಟುಂಬ, ಗುಡಿಸಲು ನಿವಾಸಿಗಳು ಹೀಗೆ ಬಡವರು, ನಿರ್ಗತಿಕರು, ದುರ್ಬಲ ವರ್ಗದ ಕುಟುಂಬಗಳಿಗೆಂದು ಮಾಡಲಾಗಿದ್ದು, ಒಟ್ಟು 30 ಕೋಟಿಗಿಂತ ಹೆಚ್ಚು ಆಯುಷ್ಮಾನ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಆಯುಷ್ಮಾನ್ ಕಾರ್ಡ್ ಫಲಾನುಭವಿಗಳ ಸಂಖ್ಯೆಯನ್ನು 100 ಕೋಟಿಗೆ ಹೆಚ್ಚಿಸುವ ಗುರಿ ಸರ್ಕಾರಕ್ಕೆ ಇದೆ.
ಪಿಎಂ ಜನ್ ಆರೋಗ್ಯ ಯೋಜನೆಯ ವ್ಯಾಪ್ತಿಗೆ ಇನ್ನಷ್ಟು ಜನರನ್ನು ಸೇರಿಸುವ ಸಾಧ್ಯತೆ ಇದ್ದು, ವರದಿ ಪ್ರಕಾರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು, ಆಶಾ ಕಾರ್ಯಕರ್ತೆಯರೂ ಇದರಲ್ಲಿ ಒಳಗೊಳ್ಳಲಿದ್ದಾರೆ. ಮುಂದಿನ ಮೂರು ವರ್ಷದಲ್ಲಿ ಇವರನ್ನು ಸ್ಕೀಮ್ ವ್ಯಾಪ್ತಿಗೆ ತರಬಹುದು ಎನ್ನಲಾಗಿದೆ ಎಂದು ಮಾಹಿತಿ ಕಂಡು ಬಂದಿದೆ.
ಇತ್ತೀಚೆಗೆ ಬಂದ ಕೆಲ ಸುದ್ದಿಗಳ ಪ್ರಕಾರ ಪಿಎಂ ಕಿಸಾನ್ ಯೋಜನೆಯಲ್ಲಿ ಸರ್ಕಾರ ನೀಡುವ ಧನ ಸಹಾಯದ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ. ಸರ್ಕಾರ ಈಗ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ನೀಡುತ್ತಿದೆ. ಇದನ್ನು ನಾಲ್ಕು ಕಂತುಗಳಲ್ಲಿ 8,000 ರೂ ನೀಡುವ ಆಲೋಚನೆಯನ್ನು ಸರ್ಕಾರ ಮಾಡಿರುವುದು ತಿಳಿದುಬಂದಿದೆ. ಬಜೆಟ್ನಲ್ಲಿ ಇದರ ಘೋಷಣೆ ಆಗಬಹುದು.