ನವದೆಹಲಿ: ಫಾರ್ಮಾ ಸಂಸ್ಥೆಗಳು ವೈದ್ಯರಿಗೆ ಮತ್ತವರ ಕುಟುಂಬಕ್ಕೆ ವಿವಿಧ ಗಿಫ್ಟ್, ವಿದೇಶೀ ಪ್ರವಾಸ ಪ್ಯಾಕೇಜ್ ಇತ್ಯಾದಿ ಕೊಡುವುದನ್ನು ಸರ್ಕಾರ ನಿರ್ಬಂಧಿಸಿದ ಮಾಹಿತಿ ಬೆಳಕಿಗೆ ಬಂದಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ, ಅನೈತಿಕ ನಡಾವಳಿಗೆ ತಡೆ ಹಾಕುವ ಉದ್ದೇಶದಿಂದ ಸರ್ಕಾರ ಹೊಸ ಮಾರ್ಕೆಟಿಂಗ್ ನಿಬಂಧನೆಗಳನ್ನು ಹೊರಡಿಸಿದೆ. ಯೂನಿಫಾರ್ಮ್ ಕೋಡ್ ಫಾರ್ ಫಾರ್ಮಸ್ಯೂಟಿಕಲ್ಸ್ ಮಾರ್ಕೆಟಿಂಗ್ ಪ್ರಾಕ್ಟಿಸಸ್ ಎಂಬ ಈ ನಿಯಮಾವಳಿಯು ಫಾರ್ಮಾ ಕಂಪನಿಗಳು ವೈದ್ಯರ ಜೊತೆ ಯಾವ ರೀತಿಯ ಸಂಬಂಧ ಹೊಂದಿರಬೇಕು, ಹೊಂದಿರಬಾರದು ಎಂಬ ನಿಯಮಗಳನ್ನು ತಿಳಿಸುತ್ತದೆ. ಅದರ ಪ್ರಕಾರ, ಫಾರ್ಮಾ ಕಂಪನಿಗಳು ವೈದ್ಯರಿಗೆ ಅಥವಾ ಅವರ ಕುಟುಂಬದವರಿಗೆ ಗಿಫ್ಟ್ಗಳು, ಪ್ರವಾಸ ಪ್ಯಾಕೇಜ್ ಮತ್ತಿತರ ಹಲವು ಕೊಡುಗೆಗಳನ್ನು ನೀಡುತ್ತವೆ. ಅದಕ್ಕೆ ಬದಲಾಗಿ, ಆ ಫಾರ್ಮಾ ಕಂಪನಿಗಳ ಉತ್ಪನ್ನಗಳನ್ನು ವೈದ್ಯರು ತಮ್ಮ ರೋಗಿಗಳಿಗೆ ಪ್ರಿಸ್ಕ್ರೈಬ್ ಮಾಡುತ್ತಾರೆ.
ವೈದ್ಯಕೀಯ ಶಿಕ್ಷಣದ ಮುಂದುವರಿದ ತರಬೇತಿ ಅಥವಾ ಸಿಎಂಇ ಹೆಸರಿನಲ್ಲಿ ವಿದೇಶಗಳಲ್ಲಿ ಸೆಮಿನಾರ್, ಕಾರ್ಯಾಗಾರ ಇತ್ಯಾದಿಗಳನ್ನು ಏರ್ಪಡಿಸಲಾಗುತ್ತದೆ. ಬಹಳಷ್ಟು ಬಾರಿ ಫಾರ್ಮಾ ಲಾಬಿಗಳು ಇದರ ಹಿಂದಿರುತ್ತವೆ. ಸಿಎಂಇಗಳಿಗೆ ಆಹ್ವಾನಿಸುವ ಮೂಲಕ ವೈದ್ಯರಿಗೆ ವಿದೇಶಗಳಿಗೆ ಪ್ರವಾಸ ಏರ್ಪಡಿಸಲಾಗುತ್ತದೆ. ಇದು ಒಂದು ರೀತಿಯಲ್ಲಿ ಫಾರ್ಮಾ ಕಂಪನಿಗಳು ವೈದ್ಯರಿಗೆ ಒಡ್ಡುವ ಪ್ರಲೋಬನೆ ಮತ್ತು ಗಿಫ್ಟ್. ಸರ್ಕಾರದ ಹೊಸ ಕಾನೂನು ಪ್ರಕಾರ ಇಂಥ ಸಿಎಂಇಗಳನ್ನು ವಿದೇಶಗಳಲ್ಲಿ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಸ್ಥಳೀಯವಾಗಿ ಮೆಡಿಕಲ್ ಕಾಲೇಜುಗಳಲ್ಲೋ, ಶಿಕ್ಷಣ ಸಂಸ್ಥೆಗಳಲ್ಲೂ, ವಿವಿಗಳಲ್ಲೋ ಇತ್ಯಾದಿ ಕಡೆ ಇಂಥ ಸೆಮಿನಾರ್ ಮತ್ತು ಕಾರ್ಯಾಗಾರಗಳನ್ನು ನಡೆಸಲು ಅವಕಾಶ ಇರುತ್ತದೆ.
ಫಾರ್ಮಾ ಕಂಪನಿಗಳು ಮತ್ತು ವೈದ್ಯರ ಮಧ್ಯೆ ಅನೈತಿಕ ಸಂಬಂಧ ಏರ್ಪಟ್ಟಿದೆ ಎನ್ನುವಂತಹ ಆರೋಪ ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ. ವೈದ್ಯರಿಗೆ ಕೇವಲ ಉತ್ಪನ್ನಗಳ ಉಚಿತ ಸ್ಯಾಂಪಲ್ ನೀಡುವುದು ಮಾತ್ರವಲ್ಲ ನಾನಾ ರೀತಿಯ ಕೊಡುಗೆಗಳನ್ನು ಕೊಡಲಾಗುತ್ತದೆ. ಸೆಮಿನಾರ್ ಇತ್ಯಾದಿ ಹೆಸರಿನಲ್ಲಿ ವೈದ್ಯರು ಮತ್ತವರ ಕುಟುಂಬ ಸದಸ್ಯರಿಗೆ ವಿದೇಶ ಪ್ರವಾಸದ ವ್ಯವಸ್ಥೆ ಮಾಡಲಾಗುವುದು, ರಿಸಾರ್ಟ್ ಬುಕ್ ಮಾಡುವುದು ಇತ್ಯಾದಿ ನಡೆಯುತ್ತದೆ. ಇವೆಲ್ಲಕ್ಕೂ ತಡೆ ನೀಡಿ, ಈ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಮಾರ್ಕೆಟಿಂಗ್ ನಿಯಮಾವಳಿಯನ್ನು ಸರ್ಕಾರ ತಂದಿದೆ ಎಂದು ಹೇಲಾಗುತ್ತಿದೆ.
ಎಲ್ಲಾ ಫಾರ್ಮಾ ಕಂಪನಿಗಳು ಇಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೆ ಅದರ ವಿವರಗಳನ್ನು ಒದಗಿಸಬೇಕು. ಆ ಕಾರ್ಯಕ್ರಮಕ್ಕೆ ಎಷ್ಟು ವೆಚ್ಚ ಆಗುತ್ತದೆ ಇತ್ಯಾದಿ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂದು ಸರ್ಕಾರದ ನೂತನ ಮಾರ್ಕೆಟಿಂಗ್ ಕೋಡ್ ತಿಳಿಸುತ್ತದೆ ಎಂದು ಮಾಹಿತಿ ಕಂಡು ಬಂದಿದೆ.