ಬೆಂಗಳೂರು: ಮಂಡ್ಯದಲ್ಲಿ ಹನುಮಧ್ವಜ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗುಡುಗಿದರು. ವಿಧಾನಸೌಧದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ದಿನದಂದು ಸಿಎಂ ಸಿದ್ದರಾಮಯ್ಯ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಆದರೆ ಕೇವಲ ಬಾಯಲ್ಲಿ ರಾಮ ಇದ್ದರೆ ಸಾಲದು, ಹೃದಯದಲ್ಲಿ ಇರಬೇಕು. ವಿಪರ್ಯಾಸ ಎಂದರೆ ಸಿದ್ದರಾಮಯ್ಯ ಹೃದಯದಲ್ಲಿ ಟಿಪ್ಪು ಸುಲ್ತಾನ್ ಇದ್ದಾನೆ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಊರೊಂದರಲ್ಲಿ ಹಾಕಿದ ರಾಮ ಬಾವುಟ ಹಾಗೂ ಹನುಮಂತ ಧ್ವಜ ಕಿತ್ತುಹಾಕಲಾಗಿದೆ. ಈ ಅನ್ಯಾಯವನ್ನು ಪ್ರತಿಭಟನೆ ಮಾಡಿ ಹಾಗೂ ಹನುಮನ ಧ್ವಜಕ್ಕೆ ಮಾಡಿದ ಅವಮಾನ ಖಂಡಿಸಿ ಭೇಟಿ ನೀಡಿ ಪ್ರತಿಭಟನೆ ನಡೆಸುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಗೆ ಹನುಮನ ಬಗ್ಗೆ ಇರುವ ದ್ವೇಷದ ರಾಜಕಾರಣ ಖಂಡಿಸ್ತೇನೆ. ಈ ನಿಟ್ಟಿನಲ್ಲಿ ಮಂಡ್ಯಕ್ಕೆ ನಾನು ಹಾಗೂ ಅಶ್ವತ್ಥ ನಾರಾಯಣ ಭೇಟಿ ನೀಡುತ್ತೇವೆ. ಸರ್ಕಾರದ ನಡೆಯನ್ನು ಪ್ರಶ್ನಿಸಿದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಕಾಂಗ್ರೆಸ್ ಹಿಂದೂಗಳನ್ನು ಟಾರ್ಗೆಟ್ ಮಾಡಿ ಬಾಂಬ್ ಇಟ್ಟವರನ್ನು ಬ್ರದರ್ಸ್ ಅಂತಾರೆ ಎಂದು ಕಿಡಿಕಾರಿದರು. ಇನ್ನು ಇದೇ ಸಂದರ್ಭದಲ್ಲಿ ಮಂಡ್ಯದಲ್ಲಿ ಕಿತ್ತು ಹಾಕಲಾಗಿರುವ ಹನುಮ ಧ್ವಜ ಇರುವ ಸ್ಥಳದಲ್ಲಿ ಮತ್ತೆ ಹನುಮ ಧ್ವಜ ಹಾರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.