ಗದಗ: ಹಣ್ಣುಗಳ ರಾಜ ಮಾವಿನ ಹಣ್ಣಿನ ಸುಗ್ಗಿ ಇದೀಗ ಆರಂಭವಾಗಿದೆ. ನಗರದ ಮಾರುಕಟ್ಟೆಗಳಲ್ಲಿ ಹಣ್ಣು ಸುವಾಸನೆ ಬೀರುತ್ತಿದ್ದು, ಮಾರುಕಟ್ಟೆಗೆ ಇದೀಗ ನಾನಾ ರೀತಿಯ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿವೆ. ಹಣ್ಣು ಮಾರುವ ಬಹುತೇಕ ಅಂಗಡಿಗಳಲ್ಲಿಬರೀ ಹಳದಿ, ಕೆಂಪು, ಹಸಿರು, ಕೇಸರಿ ಬಣ್ಣಗಳಿಂದ ನಳನಳಿಸುವ ಮಾವು ಗ್ರಾಹಕರನ್ನು ಕೈಬೀಸಿ ಕರೆಯುತ್ತಿದೆ. ಕೆಜಿಗೆ 250 ರಿಂದ 1200ರೂ.ವರೆಗೆ ಮಾರಾಟವಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮಾವು ಉಷ್ಣವಲಯದ ಬೆಳೆಯಾಗಿರುವುದರಿಂದ ಜಿಲ್ಲೆಯ ಮಣ್ಣಿಗೆ ಮಾವು ಕೃಷಿ ಸೂಕ್ತವಾಗಿದೆ. ಹೀಗಾಗಿ ಕೆಂಪು ಮಣ್ಣಿನ ಪ್ರದೇಶದಲ್ಲಿಅಧಿಕ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಕೆಲವು ರೈತರು ಮಾತ್ರ ಮಳೆ ಆಶ್ರಯದಲ್ಲಿಮಾವು ಬೆಳೆದಿದ್ದರೆ, ಹೆಚ್ಚಿನ ರೈತರು ನೀರಾವರಿ ಆಶ್ರಯದಲ್ಲಿ ಬೆಳೆದಿದ್ದು, ರತ್ನಗಿರಿ, ಅಫೂಸ್, ಮಲ್ಲಿಕಾ ತಳಿಗಳ ಮಾವಿನ ಹಣ್ಣುಗಳನ್ನು ಜಿಲ್ಲೆಯ ವಿವಿಧ ಕಡೆಗಳಲ್ಲೂ ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ. ಈ ಭಾಗದಲ್ಲಿತೋತಾಪುರಿ ನೀಲಂ ತಳಿ ಮಾವುಗಳನ್ನು ಕೂಡ ಕೆಲವು ರೈತರು ಬೆಳೆದಿದ್ದಾರೆ.
ಪ್ರತಿ ವರ್ಷ ಯುಗಾದಿ ಬಳಿಕ ಮಾರುಕಟ್ಟೆಗೆ ಆಗಮಿಸುವ ವಿವಿಧ ತಳಿಯ ಮಾವಿನ ಹಣ್ಣುಗಳು ತಮ್ಮದೇ ಆದ ಬಣ್ಣ ಹಾಗೂ ರುಚಿ ಹೊಂದಿವೆ. ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಇಷ್ಟ ಪಡುವ ಹಣ್ಣು ಇದಾಗಿದೆ. ಆದರೆ, ಸೂಕ್ತ ಸಮಯದಲ್ಲಿ ಸಮರ್ಪಕ ಮಳೆ ಹಾಗೂ ತೇವಾಂಶದ ಕೊರತೆಯಿಂದಾಗಿ ಮಾವಿನ ಬೆಳೆಯ ಇಳುವರಿ ಕುಂಠಿತವಾಗಿದೆ. ಜಿಲ್ಲೆಯಲ್ಲಿ ಏಕಾಏಕಿ ಅಕಾಲಿಕ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿಕಾಯಿ ಉದಿರಿವೆ. ಹೀಗಾಗಿ ಮಾವಿನ ಈಳುವರಿ ಕೊರತೆ ಇದ್ದರೂ ಬೆಲೆಯಲ್ಲಿಏರಿಕೆ ಕಾಣುತ್ತಿದೆ.
ರಸ್ತೆ ಬದಿಯ ಅಂಗಡಿಗಳಿಗೆ ರಾಶಿ ರಾಶಿಯಾಗಿ ಬಂದಿರುವ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಮಕ್ಕಳಿಂದ ವಯೊವೃದ್ಧರವರೆಗೂ ಎಲ್ಲರಿಗೂ ಇಷ್ಟವಾಗುವ ಹಾಗೂ ಬಾಯಲ್ಲಿನೀರುರಿಸುವ ಮಾವಿನ ಹಣ್ಣಿಗೆ ಈಗ ಎಲ್ಲಿಲ್ಲದ ಬೇಡಿಕೆ.