ನವದೆಹಲಿ: ಸತತವಾಗಿ ಶೇ. 8ರ ಬೆಳವಣಿಗೆ ಮಟ್ಟ ಕಾಯ್ದುಕೊಳ್ಳುವುದು ಕಷ್ಟ. ಭಾರತ 2047ರವರೆಗೂ ಶೇ. 8ರ ದರದಲ್ಲಿ ಆರ್ಥಿಕ ವೃದ್ಧಿ ಕಾಣಲು ಸಾಧ್ಯವಿದೆ ಎಂದು ಐಎಂಎಫ್ಗೆ ಭಾರತದ ಎಕ್ಸಿಕ್ಯೂಟಿವ್ ನಿರ್ದೇಶಕರಾಗಿರುವ ಕೆವಿ ಸುಬ್ರಮಣಿಯನ್ ಅಭಿಪ್ರಾಯಪಟ್ಟರು.
ಕಳೆದ ಹತ್ತು ವರ್ಷದಲ್ಲಿ ಜಾರಿಗೊಳಿಸಲಾಗಿರುವ ಒಳ್ಳೆಯ ನೀತಿಗಳನ್ನು ದ್ವಿಗುಣಗೊಳಿಸುವ ಮೂಲಕ ಮತ್ತು ಸುಧಾರಣಾ ಕ್ರಮಗಳನ್ನು ವೇಗವಾಗಿ ಜಾರಿಗೊಳಿಸುವುದರ ಮೂಲಕ ಭಾರತವು ಶೇ. 8ರ ದರವನ್ನು ದಾಟಬಹುದು ಎಂದು ತಿಳಿಸಿದರು.
1991ರಿಂದ ಇಲ್ಲಿಯವರೆಗೆ ಭಾರತದ ಆರ್ಥಿಕ ವೃದ್ಧಿ ಸರಾಸರಿಯಾಗಿ ಶೇ. 7ರಷ್ಟಿದೆ. ಶೇ. 8ರ ಬೆಳವಣಿಗೆ ದರ ಸಾಧಿಸಿದೆಯಾದರೂ ಸ್ಥಿರವಾಗಿ ಬಂದಿಲ್ಲ. ಸುಬ್ರಮಣಿಯನ್ ಪ್ರಕಾರ ಒಂದಷ್ಟು ಸುಧಾರಣೆಗಳನ್ನು ಮುಂದುವರಿಸಿದರೆ ಈ ವೇಗದ ಪ್ರಗತಿ ಸಾಧ್ಯವಿದೆ.
ಭಾರತ 2023ರಲ್ಲಿ ಬಹಳ ಉತ್ತಮವಾದ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ಏಪ್ರಿಲ್ನಿಂದ ಡಿಸೆಂಬರ್ವರೆಗೆ ಮೂರು ಕ್ವಾರ್ಟರ್ಗಳಲ್ಲಿ ಶೇ. 7.8, ಶೇ. 7.6 ಮತ್ತು ಶೇ. 8.4ರಷ್ಟು ಜಿಡಿಪಿ ಬೆಳೆದಿದೆ. ಈ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ. 8ರಷ್ಟು ಬೆಳೆಯುವ ನಿರೀಕ್ಷೆ ಇದೆ.
ಇದೇ ರೀತಿ 2047ರವರೆಗೂ ಭಾರತ ಶೇ 8ರ ವೇಗದಲ್ಲಿ ಬೆಳೆಯುತ್ತಾ ಹೋದರೆ 55 ಟ್ರಿಲಿಯನ್ ಡಾಲರ್ನಷ್ಟು ಅಗಾಧವಾಗಿರುತ್ತದೆ ಆರ್ಥಿಕತೆ ಎಂದು ಕೆ ವಿ ಸುಬ್ರಮಣಿಯನ್ ಹೇಳುತ್ತಾರೆ.
ಕಳೆದ 10 ವರ್ಷದಲ್ಲಿ ಭಾರತ ಸಾಧಿಸಿರುವ ಬೆಳವಣಿಗೆಯನ್ನು ನೋಡಿದರೆ, ನಾವು 10 ವರ್ಷದಲ್ಲಿ ಜಾರಿಗೆ ತಂದಿರುವ ಒಳ್ಳೆಯ ನೀತಿಗಳನ್ನು ಹೆಚ್ಚಿಸಿ, ಸುಧಾರಣೆಗಳನ್ನು ಬೇಗ ಜಾರಿಗೊಳಿಸಿದರೆ ಇಲ್ಲಿಂದ 2047ರವರೆಗೂ ದೇಶದ ಆರ್ಥಿಕತೆ ಶೇ. 8ರಷ್ಟು ವೃದ್ಧಿಸಬಲ್ಲುದು,’ ಎಂದು ಟೈಮ್ಸ್ ನೌನ ಕಾರ್ಯಕ್ರಮವೊಂದರಲ್ಲಿ ಕೃಷ್ಣಮೂರ್ತಿ ವೆಂಕಟ್ ಸುಬ್ರಮಣಿಯನ್ ತಿಳಿಸಿದ್ದಾರೆ.