ಚಿಕ್ಕಬಳ್ಳಾಪುರ: ಕೃಷಿಗೂ ಉದ್ಯಮ ರೂಪ ಸಿಕ್ಕರೆ ಸಾಕಷ್ಟು ಅನುಕೂಲ ಆಗಲಿದೆ ಎಂಬ ಉದ್ದೇಶದಿಂದ ರಾಜ್ಯ ಸರಕಾರ ಈ ಬಾರಿ ಆಯವ್ಯಯ ಭಾಷಣದಲ್ಲಿ ಕೃಷಿ ನವೋದ್ಯಮ ಎಂಬ ಹೊಸ ಯೋಜನೆ ಘೋಷಿಸಿದ್ದು, ವಿಶೇಷ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸಲು 2023-24ರ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ನವೋದ್ಯಮ ಎಂಬ ಹೊಸ ಯೋಜನೆ ಘೋಷಿಸಿದ್ದು, ಇದು ಕೃಷಿಗೆ ಸಾಕಷ್ಟು ಅನುಕೂಲ ತಂದುಕೊಡಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ರೈತರ ನೂತನ ಪರಿಕಲ್ಪನೆಗಳಿಗೆ ಉತ್ತೇಜನ ನೀಡಿ ಕೃಷಿಯೊಂದಿಗೆ ಉದ್ಯಮಿಗಳಾಗಿ ಪರಿವರ್ತನೆ ಹೊಂದುವಂತೆ ಮಾಡುವುದು. ರೈತರ ಆದಾಯವೃದ್ಧಿಸುವಲ್ಲಿ ಸಹಕಾರಿಯಾಗುವಂತೆ ರಾಜ್ಯಾದ್ಯಂತ ಕೃಷಿ ವಲಯದಲ್ಲಿ ನೂತನ ಆವಿಷ್ಕಾರಗಳು, ನವೀನ ಉತ್ಪನ್ನಗಳು ಹಾಗೂ ಸೇವೆಗಳನ್ನು ಒಳಗೊಂಡಿರುವ ಕೃಷಿ ನವೋದ್ಯಮಗಳಿಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ.
ಕೃಷಿ ಕ್ಷೇತ್ರದಲ್ಲಿಉದ್ಯಮಶೀಲತೆ ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಹಾಗೂ ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣ ಉತ್ತೇಜಿಸಲು ಕೃಷಿ ನವೋದ್ಯಮ ಕಾರ್ಯಕ್ರಮ ಯೋಜಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಉದ್ಯಮ ನೆಲಗೊಂಡು ಕೃಷಿ ಉತ್ಪನ್ನಗಳಿಗೂ ಮೌಲ್ಯವರ್ಧನೆ ಆಗಲಿದೆ.
ಕೃಷಿಯಲ್ಲಿನ ನವೀನ ತಾಂತ್ರಿಕತೆಗಳು ಹಾಗೂ ನೂತನ ಪರಿಕಲ್ಪನೆಗಳಿಂದ ಕೃಷಿಯಲ್ಲಿ ನವೋದ್ಯಮಗಳನ್ನು ಪ್ರಾರಂಭಿಸಿ ಕೃಷಿ ವಲಯದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವುದು. ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಆಸಕ್ತ ಪ್ರಗತಿಪರ ರೈತರು ಕೃಷಿಯಲ್ಲಿ ನವೋದ್ಯಮ ಆರಂಭಿಸಲು ಸಹಾಯ ನೀಡಿ ಗ್ರಾಮೀಣ ಭಾಗದಲ್ಲಿಉದ್ಯೋಗ ಸೃಜನೆ ಮಾಡುವುದು.