ಸಿದ್ದರಾಮಯ್ಯ ಪ್ರಶ್ನೆಗಳಿಗೆ ಕನಕಪುರದ ಬಂಡೆಗೆ ಉತ್ತರ ಗೊತ್ತು
ನಿಮ್ಮ ಸುದ್ದಿ ವಿಜಯಪುರ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಾಲ ಕಾಲಕ್ಕೆ ಕೇಳುವ ಪ್ರಶ್ನೆಗಳಿಗೆ ಕನಕಪುರದ ಬಂಡೆ ಬಳಿ ಉತ್ತರವಿದೆ. ಅದರಲ್ಲಿ ನಮಗೆ ಆಸಕ್ತಿ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಮ್ಮ ಸರಕಾರ ಪ್ರವಾಹ ಪರಿಸ್ಥಿತಿ, ಕೊರೋನಾ ನಿಯಂತ್ರಣಕ್ಕೆ ಸರಿಯಾಗಿ ಕೆಲಸ ಮಾಡಿದ್ದು, ಸುವ್ಯವಸ್ಥಿತ ಆಡಳಿತ ನೀಡುತ್ತಿದೆ. ಇದನ್ನು ಸಿದ್ದರಾಮಯ್ಯನವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಟೀಕೆ ಮಾಡುತ್ತಿದ್ದು, ಮಾಡಲಿ. ಅವರ ಯಾವ ಮಾತಿನಲ್ಲೂ ಹುರುಳಿಲ್ಲ. ನಮ್ಮ ಸರ್ಕಾರ ಸುಬಧ್ರವಾಗಿದೆ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಲಿದೆ ಎಂದರು.
ನಾನಾ ಸಮುದಾಯದವರು ಮೀಸಲಾತಿ ನೀಡಿ, ನಮಗೆ 2ಎ ಗೆ ಸೇರಿಸಿ ಎಂದು ಹೇಳುತ್ತಿದ್ದಾರೆ. ಸರ್ಕಾರ ಸಮನ್ವಯತೆಯನ್ನು ಕಾಯ್ದುಕೊಂಡು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ಸುಧೀರ್ಘ ರಾಜಕೀಯ ಅನುಭವದಿಂದ, ಈ ಸಮಸ್ಯೆಯನ್ನು ಅತ್ಯಂತ ನಾಜೂಕಾಗಿ ನಿರ್ವಹಿಸುತ್ತಾರೆ. ಯಾರಿಗೂ ಈ ಕುರಿತು ಆತಂಕ ಬೇಡ ಎಂದರು.