ನಿಮ್ಮ ಸುದ್ದಿ ಬಾಗಲಕೋಟೆ
ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸುವುದು ಹಾಗೂ ಅಂಬೇಡ್ಕರ್ ಅವರ ಸಮಾನತೆ ಮತ್ತು ನೈತಿಕ ಚುನಾವಣೆ ವ್ಯವಸ್ಥೆಯನ್ನು ಪುನ: ಸ್ಥಾಪಿಸಲು ಗ್ರಾಪಂ ಚುನಾವಣೆಗೆ ಕರವೇ ಪಡೆ ಸಿದ್ದವಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ರಮೇಶ ಬದ್ನೂರ್ ತಿಳಿಸಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಕರ ವೇದಿಕೆಯ ನಾನಾ ಘಟಕಗಳ ಪದಾಕಾರಿಗಳ ಸಭೆಯಲ್ಲಿ ಈ ಕುರಿತು ಅವರು ಮಾತನಾಡಿದರು. ಗ್ರಾಮೀಣ ಅಭಿವೃದ್ಧಿಗಾಗಿ ಸರಕಾರ ವಾರ್ಷಿಕ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ಆದರೆ ಇಂದಿನವರೆಗೂ ಪಕ್ಷ ರಾಜಕಾರಣದಿಂದ ರಾಜ್ಯದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಹೀಗಾಗಿ ಪಕ್ಷ ರಾಜಕೀಯದಿಂದ ಗ್ರಾಮೀಣ ಪ್ರದೇಶಗಳನ್ನು ಮುಕ್ತಗೊಳಿಸಿ ಅಭಿವೃದ್ಧಿ ಪರ ಸ್ಥಲೀಯ ಆಡಳಿತ ವ್ಯವಸ್ಥೆ ನಿರ್ಮಾಣಕ್ಕೆ ವೇದಿಕೆ ಚುನಾವಣೆ ಅಖಾಡಕ್ಕೆ ಇಳಿಯಲು ನಿರ್ಧರಿಸಿದೆ ಎಂದು ಹೇಳಿದರು.
ಸ್ಥಳೀಯರೇ ಸ್ಥಳೀಯ ಆಡಳಿತ ನಡೆಸಲು ಗ್ರಾಮಗಳ ಅಭಿವೃದ್ಧಿಗೆ ಉತ್ತಮ ರಸ್ತೆ, ಚರಂಡಿ, ವಿದ್ಯುತ್ ದೀಪ, ಶೌಚಾಲಯ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಕೆ, ಸುವ್ಯವಸ್ಥಿತ, ಸುಸಜ್ಜಿತ ಶಾಲೆ, ಅಂಗನವಾಡಿ ಕೇಂದ್ರ, ಸರಕಾರಿ ಕಟ್ಟಡ ನಿರ್ಮಾಣ, ಗ್ರಾಮೀಣ ಪ್ರದೇಶದಲ್ಲಿ ಉದ್ಯಾನವನ, ಆಟದ ಮೈದಾನಗಳ ನಿರ್ಮಾಣಕ್ಕೆ ಪಂಚಾಯಿತಿ ಆಡಳಿತ ಮಂಡಳಿಯವರೇ ನೀಲನಕ್ಷೆ, ಕ್ರಿಯಾಯೋಜನೆ ತಯಾರಿಸಿ ಸರಕಾರದಿಂದ ಅನುದಾನ ಪಡೆದು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು, ಅನೇಕ ವಸತಿ ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಮತ್ತು ನಿವೇಶನ ಹಂಚಿಕೆ ಮಾಡುವುದು. ಗ್ರಾಮಗಳ ಸೌಂದರ್ಯ ವೃದ್ಧಿಗೆ ಪರಿಸರ ಸ್ನೇಹಿ ಸಸಿ ನೆಡುವ, ನೀರು ಇಂಗಿಸುವ, ಚೆಕ್ಕಾ ಡ್ಯಾಂಗಳನ್ನು ಕಟ್ಟುವುದು ಅಷ್ಟೇ ಅಲ್ಲದೆ ಸುಂದರ ವಿಹಾರ ತಾಣಗಳನ್ನಾಗಿ ಪರಿವರ್ತಿಸಲು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಕ್ಕೆ ತರುವುದು. ಮುಖ್ಯವಾಗಿ ಭ್ರಷ್ಟಾಚಾರ ರಹಿತ ಚುನಾವಣೆ, ಭ್ರಷ್ಟಾಚಾರ ರಹಿತ ಆಡಳಿತ ಎಂಬ ವಾಕ್ಯದೊಂದಿಗೆ ಚುನಾವಣೆಗೆ ಸಜ್ಜಾಗಿದ್ದೇವೆ ಎಂದರು.
ಬಸವರಾಜ ಧರ್ಮಂತಿ, ರಂಜಾನ ನಧಾಫ್, ಮಲ್ಲು ಕಟ್ಟಿಮನಿ, ಆತ್ಮಾರಾಮ ನೀಲನಾಯಕ, ವಿನೀತ ಮೇಲಿನಮನಿ, ಗೀತಾ ದಳವಾಯಿ, ವಾರ್ಪತಿ ಕೋರಡ್ಡಿ, ಪುಷ್ಪಾ ತಿಮ್ಮಾಪೂರ, ರವಿ ಶಿಂಧೆ, ಡಿ.ಡಿ.ನದಾಫ್, ಗಣಪತಿ ಭೋವಿ, ಮಲ್ಲು ಮಡಿವಾಳರ, ವೀರಣ್ಣ ಬಡಿಗೇರ, ವಿಜಯಕುಮಾರ ಆಸಂಗಿ ಇತರರು ಇದ್ದರು.