ಕೆ.ಆರ್. ಪೇಟೆ: ನಮ್ಮ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇನ್ನೂ ಕೂಡ ಸೀಟು ಹಂಚಿಕೆಯ ಮಾತುಕತೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ ಅವರನ್ನು ಶಾಸಕ ಎಚ್.ಟಿ. ಮಂಜು ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಹಾರ ಹಾಕಿ ಸನ್ಮಾನಿಸಿ ಬರಮಾಡಿಕೊಂಡಿದ್ದು, ‘ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ. ಹಿಂದೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಾಗೂ ಅಭ್ಯರ್ಥಿ ನಿಖಿಲ್ ಅವರಿಗೆ ಆಗಿರುವ ಅವಮಾನದ ಸೇಡನ್ನು ತೀರಿಸಕೊಳ್ಳಬೇಕು. ಮತದಾರರ ಕಾಲುಕಟ್ಟಿ ಮತ ಹಾಕಿಸುತ್ತೇವೆ. ದಯಮಾಡಿ ಸ್ಪರ್ಧಿಸಬೇಕು,” ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ”ನಮ್ಮ ಪಕ್ಷವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಪ್ರಧಾನಿ ಮೋದಿಯವರು ಬಹಳ ಗೌರವದಿಂದ ಜೆಡಿಎಸ್ ಮೈತ್ರಿಯನ್ನು ಸ್ವಾಗತಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದಾರೆ. ಇನ್ನೂ ಕೂಡ ಸೀಟು ಹಂಚಿಕೆಯ ಮಾತುಕತೆಯು ಮುಗಿದಿಲ್ಲ. ಅದಕ್ಕೆ ಮುಂಚೆಯೇ ನಾನು ಮಾತನಾಡಿದರೆ ಅದು ತಪ್ಪಾಗುತ್ತದೆ,” ಎಂದರು.ಕಾರ್ಯಕರ್ತರು ಯಾರ ಬಗೆಗೂ ಸೇಡನ್ನು ತೋರಿಸುವ ಅವಶ್ಯಕತೆಯಿಲ್ಲ. ಚುನಾವಣೆ ಸಂದರ್ಭದಲ್ಲಿ ಸೋಲು-ಗೆಲುವು ಸಾಮಾನ್ಯ. ಇದಕ್ಕಾಗಿ ನಾನು ವ್ಯಥೆಪಟ್ಟಿಲ್ಲ ಎಂದು ತಿಳಿಸಿದರು.