ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ ೨ನೇ ಅಲೆಗೆ ಸಂಕಷ್ಟದಲ್ಲಿರುವ ನಾನಾ ಸಮುದಾಯಗಳಿಗೆ ಸರಕಾರ ಪ್ಯಾಕೇಜ್ ಘೋಷಿಸಿದ್ದು ಸ್ವಾಗತಾರ್ಹ, ಆದರೆ ಸಂಕಷ್ಟದಲ್ಲಿರುವ ನೇಕಾರರಿಗೂ ಪರಿಹಾರ ಒದಗಿಸುವಲ್ಲಿ ಸರಕಾರ ಕಾಳಜಿ ತೋರಬೇಕು ಎಂದು ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಸದಸ್ಯ ಗುರುನಾಥ ಚಳ್ಳಮರದ ಆಗ್ರಹಿಸಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಒಟ್ಟಾರೆ ೧,೨೫೦ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ ಬಿಜೆಪಿ ಸರಕಾರ ಹಲವರ ಸಂಕಷ್ಟಕ್ಕೆ ಸ್ಪಂಧಿಸಿದೆ. ಆದರೆ ಇದೇ ಸಂದರ್ಭದಲ್ಲಿ ನೇಕಾರ ಸಮುದಾಯಕ್ಕೆ ಯಾವುದೇ ಪರಿಹಾರ ದೊರೆಯದಿರುವುದು ನೋವಿನ ಸಂಗತಿ ಆಗಿದೆ ಎಂದು ಹೇಳಿದ್ದಾರೆ.
ನೇಕಾರ ಸಮುದಾಯ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ನೇಯ್ದೆ ಸೀರೆಗಳು ಮಾರಾಟವಾಗದೆ ಮೂಲೆ ಸೇರಿವೆ. ಮದುವೆ ಹಬ್ಬದ ಇಂದಿನ ಅವಧಿಯಲ್ಲಿ ಮಾರಾಟಕ್ಕೆ ಅವಕಾಶವಿಲ್ಲದೆ ಸೀರೆ ನೇಯ್ದ ಕೂಲಿ ಸಹ ದೊರೆಯದ ಸ್ಥಿತಿಗೆ ಬಂದೊದಗಿದೆ. ಪ್ಯಾಕೇಜ್‌ನಲ್ಲಿ ನೇಕಾರರನ್ನು ಕಡೆಗಣಿಸಿರುವುದು ಖೇದಕರ ಸಂಗತಿ. ರೈತರು ಮತ್ತು ನೇಕಾರರ ಎರಡು ಕಣ್ಣುಗಳೆಂದು ಹೇಳಿದ ಮುಖ್ಯಮಂತ್ರಿಗಳು ಎಲ್ಲ ನೇಕಾರ ವರ್ಗವನ್ನು ಕಡೆಗಣಿಸದೆ ಶೀಘ್ರ ಲಾಕ್‌ಡೌನ್‌ನ ಆರ್ಥಿಕ ಪ್ಯಾಕೇಜ್ ನೇಕಾರರಿಗೂ ದೊರೆಯುವಂತಾಗಲಿ ಎಂದು ಆಗ್ರಹಿಸಿದ್ದಾರೆ.