This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ರೈತರ ಬೇಡಿಕೆಗೆ ತಕ್ಕಂತೆ ಬೀಜ, ಗೊಬ್ಬರ ಪೂರೈಕೆಗೆ ಕ್ರಮ : ಸಚಿವ ಉಮೇಶ ಕತ್ತಿ

ಜಿ.ಪಂ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆ

ನಿಮ್ಮ ಸುದ್ದಿ ಬಾಗಲಕೋಟೆ

ಪ್ರಸಕ್ತ ಮುಂಗಾರು ಹಂಗಾಮಿಗೆ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿಂದು ಜರುಗಿದ ಜಿ.ಪಂ ಮೊದಲನೇ ತ್ರೈಮಾಸಿಕ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರ ಬೇಡಿಕೆಗೆ ತಕ್ಕಂತೆ ಬಿತ್ತನ ಬೀಜ ಪೂರೈಕೆಗೆ ಕ್ರಮ ವಹಿಸಲು ತಿಳಿಸಿದ ಸಚಿವರು ಪ್ರಸಕ್ತ ಹಂಗಾಮಿಗೆ ಲಭ್ಯವಿರುವ ಬಿತ್ತನೆ ಬೀಜ ಹಾಗೂ ಗೊಬ್ಬರಗಳ ಮಾಹಿತಿಯನ್ನು ಪಡೆದುಕೊಂಡರು. ರೈತರಿಗೆ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಕ್ರಮವಹಿಸಲು ಸೂಚಿಸಿದರು.

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು. ವಿಮೆಗೆ ಒಳಪಡಿಸಿದವರಿಗೆ ಪರಿಹಾರಧನ ವಿತರಣೆ ಬಗ್ಗೆ ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಒಟ್ಟು ೧೨ ಕೋಟಿ ರೂ.ಗಳ ಪೈಕಿ ೮ ಕೋಟಿ ರೂ.ಗಳ ಪರಿಹಾರಧನ ವಿತರಿಸಿದ್ದು, ೪ ಕೋಟಿ ರೂ.ಗಳ ಮಾತ್ರ ಬಾಕಿ ಉಳಿದಿದೆ. ಬಾಕಿ ಪಾವತಿಗೆ ಕ್ರಮವಹಿಸಲಾಗುವುದೆಂದು ಸಭೆಗೆ ತಿಳಿಸಿದರು.

ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ರೈತರು ತೋಟಗಾರಿಕೆ ಬೆಳೆಯತ್ತ ಗಮನಹರಿಸಲು ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು. ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ತಳಿಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ಲಾಭದಾಯಕವಾಗುವ ಬೆಳೆ ಬೆಳೆದು ಆರ್ಥಿಕವಾಗಿ ರೈತರು ಬೆಳೆಯುವಂತೆ ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಅಧಿಕಾರಿಗಳು ಸಭೆಗೆ ಬರುವಾಗ ಯೋಜನೆಗಳ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಲು ಸಚಿವರು ತಿಳಿಸಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ ಅರಣ್ಯ ಇಲಾಖೆಯವರು ಅರಣ್ಯ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ವಿವಿದೆಡೆ ಗಿಡಗಳನ್ನು ನೆಟ್ಟು ಹಸರಿಕರಣಕ್ಕೆ ಕ್ರಮವಹಿಸಲು ತಿಳಿಸಿದ ಅವರು ಜಿಲ್ಲೆಯ ಪ್ರತಿಯೊಂದು ಸರಕಾರಿ, ಖಾಸಗಿ ಶಾಲಾ ಆವರಣದಲ್ಲಿ, ವಿವಿಧ ವಸತಿ ನಿಲಯ, ಬಸ್ ನಿಲ್ದಾಣ ಆವರಣ, ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳ ಪೋಷಿಸುವ ಕಾರ್ಯವಾದಾಗ ಮಾತ್ರ ಹಚ್ಚಿದ ಗಿಡಗಳು ಬೆಳೆಯಲು ಸಾಧ್ಯ. ಗಿಡ ಹಚ್ಚುವ ಕಾರ್ಯದ ಜೊತೆ ಬೆಳೆಸುವ ಕಾರ್ಯವಾಗಬೇಕು. ನೀರಿನ ಪೈಪಲೈನ್ ಮತ್ತು ರಸ್ತೆ ಅಗಲೀಕರಣ ಕಾಮಗಾರಿಗಳಲ್ಲಿ ಅರಣ್ಯ ಇಲಾಖೆಯವರು ತೊಂದರೆ ನೀಡಬಾರದೆಂದರು.

ರೇಷ್ಮೆ ಇಲಾಖೆಯಲ್ಲಿ ಯೋಜನೆಗೆ ಖರ್ಚು ಮಾಡುವದರಕ್ಕಿಂತ ಅಧಿಕಾರಿ, ಸಿಬ್ಬಂದಿಗಳ ವೇತನಕ್ಕೆ ಹೆಚ್ಚು ಅನುದಾನ ವ್ಯಯವಾಗುತ್ತಿದ್ದು, ಇಲಾಖೆಯ ಎಲ್ಲ ಸಿಬ್ಬಂದಿಗಳನ್ನು ಬೇರೆ ಇಲಾಖೆಗೆ ಪ್ರಭಾರವನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಜಾನುವಾರುಗಳಿಗೆ ಕಾಲುಬಾಯಿ ರೋಗ ಬಾರದಂತೆ ಲಸಿಕೆ ಹಾಕಬೇಕು.

ಸಂಭವನೀಯ ಕೋವಿಡ್ ೩ನೇ ಅಲೆ ನಿಯಂತ್ರಣಕ್ಕೆ ಎಲ್ಲ ರೀತಿಯಿಂದ ಸಜ್ಜಾಗಬೇಕು. ನಿಯಂತ್ರಣಕ್ಕೆ ಬೇಕಾಗುವ ಎಲ್ಲ ರೀತಿಯ ಔಷಧ, ವೈದ್ಯಕೀಯ ಉಪಕರಣ, ಸಲಕರಣಗಳ ಪಟ್ಟಿಯನ್ನು ತಯಾರಿಸಿ ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿಗೆ ಸೂಚಿಸಿದರು. ಜಿಲ್ಲಾ ಸೇರಿದಂತೆ ಎಲ್ಲ ಆಯುಷ ಆಸ್ಪತ್ರೆಗಳನ್ನು ಸಜ್ಜುಗೊಳಿಸಲು ಜಿಲ್ಲಾ ಆಯುಷ ಅಧಿಕಾರಿ ಡಾ.ಮಲ್ಲಣ್ಣ ತೋಟದ ಅವರಿಗೆ ಉಪ ಮುಖ್ಯಮಂತ್ರಿಗಳು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಮಾತನಾಡಿ ಇದೇ ಜುಲೈ ೧೯ ಮತ್ತು ೨೨ ರಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಒಟ್ಟು ಎರಡು ಪತ್ರಿಕಗಳ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರತಿ ಕೊಠಡಿಗೆ ೧೨ ವಿದ್ಯಾರ್ಥಿಗಳಿರಲಿದ್ದಾರೆ. ಪರೀಕ್ಷೆಗೆ ೧೭೩ ಕೇಂದ್ರ, ೭೩೪೩ ಪರೀಕ್ಷಾ ಸಿಬ್ಬಂದಿಗಳನ್ನು ನೇಮಿಸಿರುವುದಾಗಿ ತಿಳಿಸಿದ ಅವರು ಕೆಮ್ಮು, ನೆಗಡಿ, ಜ್ವರ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ, ಪಾಜಿಟಿವ್ ವಿದ್ಯಾರ್ಥಿಗೆ ಸಿಸಿಸಿ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ನಂತರ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕ ವೀರಣ್ಣ ಚರಂತಿಮಠ, ಆನಂದ ನ್ಯಾಮಗೌಡ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ್, ಉಪ ಕಾರ್ಯದರ್ಶಿ ಅರಮೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಎಂ.ಗAಗಪ್ಪ, ಸಿದ್ದು ಹುಲ್ಲೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.

ಜಿ.ಪಂ ವಾರ್ಷಿಕ ಕ್ರೀಯಾ ಯೋಜನೆಗೆ ಅನುಮೋದನೆ
ಜಿಲ್ಲಾ ಪಂಚಾಯತಿಯ ೨೦೨೧-೨೨ನೇ ಸಾಲಿನ ಇಲಾಖಾವಾರು, ಫಲಾನುಭವಿ, ವೇತನ ಹಾಗೂ ಕಾಮಗಾರಿ ಸೇರಿದಂತೆ ಒಟ್ಟು ೩೭೦.೨೨ ಕೋಟಿ ರೂ.ಗಳ ವಾರ್ಷಿಕ ಕ್ರೀಯಾ ಯೋಜನೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿ.ಪಂ ಆಡಳಿತಾಧಿಕಾರಿ ಶಿವಯೋಗ ಕಳಸದ ಅನುಮೋದನೆ ನೀಡಿದರು.

ಪಂಚಾಯತ್ ರಾಜ್ ವಿಭಾಗ ೬೧೪.೧೦ ಲಕ್ಷ ರೂ., ಸಾಮಾನ್ಯ ಶಿಕ್ಷಣ ೧೮೩೭೫.೦೧ ಲಕ್ಷ, ವಯಸ್ಕರ ಶಿಕ್ಷಣ ೩೦.೨೮ ಲಕ್ಷ, ಕ್ರೀಡೆ ಮತ್ತು ಯುವಜನ ಸೇವೆಗಳು ೯೭.೭೬ ಲಕ್ಷ, ಕಲೆ ಮತ್ತು ಸಂಸ್ಕೃತಿ ೧೦ ಲಕ್ಷ, ಆರೋಗ್ಯ ೪೭೪೩.೨೦ ಲಕ್ಷ, ಕುಟುಂಬ ಕಲ್ಯಾಣ ಇಲಾಖೆ ೨೦೪೮.೪೨ ಲಕ್ಷ, ಆಯುಷ ಇಲಾಖೆ ೩೪೩.೨೮ ಲಕ್ಷ, ಸಮಾಜ ಕಲ್ಯಾಣ ಇಲಾಖೆ ೨೪೯೫.೬೮ ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ೪೦೦೯.೮೭ ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ೪೯೬.೬೯ ಲಕ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ೯೬.೨೦ ಲಕ್ಷ ರೂ.ಗಳಿಗೆ ಅನುಮೋದನೆ ನೀಡಿದರು.

ಅದೇ ರೀತಿ ತೋಟಗಾರಿಕೆಗೆ ೪೪೪.೪೯ ಲಕ್ಷ ರೂ., ಕೃಷಿ ಇಲಾಖೆಗೆ ೧೨೬.೮೦ ಲಕ್ಷ ರೂ., ಭೂಸಾರ ಮತ್ತು ಜಲಸಂರಕ್ಷಣೆಗೆ ೧೪೦.೬೧ ಲಕ್ಷ, ಪಶು ಸಂಗೋಪನೆ ೩೩೩.೧೦ ಲಕ್ಷ, ಮೀನುಗಾರಿಕೆ ೯೯.೯೦ ಲಕ್ಷ, ಅರಣ್ಯ ಮತ್ತು ವನ್ಯಜೀವನ ೮೨೦.೮೫ ಲಕ್ಷ ರೂ., ಸಹಕಾರ ೪ ಲಕ್ಷ, ಇತರೆ ಗ್ರಾಮೀಣಾಭಿವೃಧ್ದಿ ಕಾರ್ಯಕ್ರಮ ೪೩೬.೩೪ ಲಕ್ಷ, ಸಣ್ಣ ನೀರಾವರಿ ೨೧.೮೫ ಲಕ್ಷ, ರೇಷ್ಮೆ ೪೮೫.೬೨ ಲಕ್ಷ, ಗ್ರಾಮೀಣ ಮತ್ತು ಸಣ್ಣ ಉದ್ಯಮಗಳು ೬೭.೭೪ ಲಕ್ಷ, ಕೈಮಗ್ಗ ಮತ್ತು ಜವಳಿ ೮೬.೯೪ ಲಕ್ಷ, ಸಚಿವಾಲಯ ಆರ್ಥಿಕ ಸೇವೆಗಳು ಜಿಲ್ಲಾ ಯೋಜನಾ ಘಟಕ ೬೬.೭೨ ಲಕ್ಷ, ವಿಜ್ಞಾನ ಸಂಶೋಧನೆ ೬.೫೦ ಲಕ್ಷ, ಕೃಷಿ ಮಾರುಕಟ್ಟೆ ೪.೪೧ ಲಕ್ಷ, ರಸ್ತೆ ಮತ್ತು ಸೇತುವೆ ೫೧೫.೯೧ ಲಕ್ಷ ರೂ.ಗಳ ಕ್ರೀಯಾ ಯೋಜನೆಗೆ ಅನುಮೋದನೆ ನೀಡಲಾಯಿತು.

ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಣೆ
ರಾಜ್ಯ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ವತಿಯಿಂದ ಅಲೆಮಾರಿ ಅರೆ ಅಲೆಮಾರಿ ಸೂಕ್ಷö್ಮ ಮತ್ತು ಅತೀ ಸೂಕ್ಷö್ಮ ಸಮುದಾಯಗಳ ಸ್ವಯಂ ಉದ್ಯೋಗ ಯೋಜನೆಯಡಿ ಸಣ್ಣ ವ್ಯಾಪಾರಗಳಾದ ಬುಟ್ಟಿ ಹೆಣೆಯುವುದು, ಬಿದರಿನ ಅಂಗಡಿ, ಆಡು ಮತ್ತು ಕುರಿ ಸಾಗಾಣಿಕೆ, ಮೀನು ವ್ಯಾಪಾರ, ಹೈನುಗಾರಿಕೆ, ಭೂ ಒಡೆತನ ಹಾಗೂ ಸಮೃದ್ದಿ ಯೋಜನೆಯಡಿಯಲ್ಲಿ ಮಂಜೂರಾದ ಸಹಾಯಧನದ ಚೆಕ್‌ಗಳನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಸೇರಿದಂತೆ ಇತರೆ ಜನಪ್ರತಿನಿಧಿಗಳು ಫಲಾನುಭವಿಗಳಿಗೆ ವಿತರಿಸಿದರು.

 

 

Nimma Suddi
";