ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರಿಗೆ ವರ್ಷಕ್ಕೆ ನೀಡಲಾಗುವ ಹಣದ ಮೊತ್ತವನ್ನು ಸರ್ಕಾರ ಏರಿಸುತ್ತಿಲ್ಲ. ವರ್ಷದ ಮೊತ್ತವನ್ನು ಅರು ಸಾವಿರ ರೂನಿಂದ ಎಂಟು ಸಾವಿರ ರೂಗೆ ಏರಿಸಲು ಸರ್ಕಾರ ನಿರ್ಧರಿಸಿದೆ ಎನ್ನುವಂತಹ ಸುದ್ದಿ ಇದ್ದು,ನಿರೀಕ್ಷೆ ಹುಸಿಯಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಯಾವುದೇ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಕೇಂದ್ರ ಕೃಷಿ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು (ಫೆ. 6) ಸಂಸತ್ಗೆ ತಿಳಿಸಿದ್ದು, 2019ರ ಮಧ್ಯಂತರ ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆಗೆ ಚಾಲನೆ ಕೊಡಲಾಗಿತ್ತು. ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ರೂ ಹಣವನ್ನು ಸರ್ಕಾರ ಕೊಡುತ್ತದೆ.
ಒಂದು ಹೆಚ್ಚುವರಿ ಕಂತು ಸೇರಿಸುವ ಪ್ರಸ್ತಾಪ ಸರ್ಕಾರದ ಮುಂದಿದ್ದು, ವರ್ಷಕ್ಕೆ ಎಂಟು ಸಾವಿರ ರೂ ನೀಡಲಾಗುತ್ತದೆ. ಇದು 2024ರ ಮಧ್ಯಂತರ ಬಜೆಟ್ನಲ್ಲಿ ಘೋಷಣೆ ಆಗಬಹುದು ಎನ್ನುವಂತಹ ಸುದ್ದಿ ಇತ್ತು. ಆದರೆ, ಇಂಟೆರಿಮ್ ಬಜೆಟ್ನಲ್ಲಿ ಇದರ ಘೋಷಣೆ ಆಗಿಲ್ಲ. ಈಗ ಕೃಷಿ ಸಚಿವಾಲಯ ಈ ಪ್ರಸ್ತಾಪ ತಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದೆ.2019ರಿಂದ ಇಲ್ಲಿಯವರೆಗೆ ಸರ್ಕಾರ ತಲಾ 2,000 ರೂಗಳ 15 ಕಂತುಗಳ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ.
ನವೆಂಬರ್ 15ಕ್ಕೆ 15ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಈಗ 16ನೇ ಕಂತಿನ ಹಣ 2024ರ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಬಹುದು ಎನ್ನಲಾಗಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಇಲ್ಲಿಯವರೆಗೆ 11 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ.