ನಿಮ್ಮ ಸುದ್ದಿ ಬಾಗಲಕೋಟೆ
ನಗರಸಭೆಯಿಂದ ಸ್ವಚ್ಛ ಭಾರತ ಮಿಷನ್ ಅನುದಾನ ಯೋಜನೆಯಡಿ ಖರೀದಿಸಲಾದ ೧೩ ಹೊಸ ಆಟೋ ಟಿಪ್ಪರ್ ವಾಹನಗಳಿಗೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು.
ನಗರದ ಬಸವೇಶ್ವರ ವೃತ್ತದ ಬಳಿ ಇರುವ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಹೊಸ ಆಟೋ ಟಿಪ್ಪರ್ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ನಗರದ ಘನತ್ಯಾಜ್ಯ ವಿಲೇವಾರಿಗೆ ವಾಹನಗಳ ಅಗತ್ಯವಿದ್ದು, ಮೊದಲ ಹಂತದಲ್ಲಿ ೪೭.೨೪ ಲಕ್ಷ ರೂ.ಗಳಲ್ಲಿ ೩ ವ್ಹೀರ್ಸ್ಗಳ ೧೩ ಆಟೋ ಟಿಪ್ಪರ್ಗಳನ್ನು ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ೪ ವ್ಹೀರ್ಸ್ನ ೨ ಆಟೋ ಟಿಪ್ಪರ್, ಎರಡು ಟಿಪ್ಪರ್ ಟ್ರಕ್, ಎರಡು ಕಂಪ್ಯಾಕ್ಟರ್ ಹಾಗೂ ಒಂದು ಟ್ಯಾಕ್ಟರ್ ಟ್ರೇರ್ಸ್ ಖರೀದಿಸಲಾಗುತ್ತಿದೆ. ಅವುಗಳ ಟೆಂಡರ್ ಹಂತದಲ್ಲಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾದ್ಯಕ್ಷ ಬಸವರಾಜ ಅವರಾದಿ, ನಗರಸಭೆ ಸಭಾಪತಿ ರವಿ ದಾಮಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಬೂಡಾದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ನಗರಸಭೆ ಪೌರಾಯುಕ್ತ ಮುನಿಷಾಮಪ್ಪ, ಸಹಾಯಕ ಅಭಿಯಂತರ ಆರ್.ಆರ್.ಕುಲಕರ್ಣಿ, ಪರಿಸರ ಅಭಿಯಂತರ ಎಫ್.ವಾಯ್.ಕಲಸರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.