ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ ಮಹಾಮಾರಿ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಹಮ್ಮಿಕೊಂಡ ಮೂರನೇ ಹಂತದ ಕೋವಿಡ್-19 ಲಸಿಕೆ ನೀಡುವ ಅಭಿಯಾನಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಚಾಲನೆ ನೀಡಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ನೂತನ ಜಿ.ಪಂ ಸಭಾಭವನದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು ಇಡೀ ಪ್ರಪಂಚವನ್ನೇ ತಲ್ಲಗೊಳಿಸಿದ ಕೊರೊನಾ ನಿಯಂತ್ರಣಕ್ಕೆ ಲಸಿಕೆ ಕಂಡುಹಿಡಿಯಲಾಗಿದೆ. ಈ ಲಸಿಕೆ ಸುರಕ್ಷಿತವಾಗಿದ್ದು, ಇದನ್ನು ಹಾಕಿಸಿಕೊಂಡು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಮೊದಲ ಹಂತದಲ್ಲಿ ಕೋವಿಡ್ ನಿಯಂತ್ರಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಫಲಾನುಭವಿಗಳಿಗೆ ನೀಡಲಾಗಿದೆ. ನಂತರ ಕಂದಾಯ, ಪೌರಾಡಳಿ, ಪಂಚಾಯತ ರಾಜ್ ಇಲಾಖೆ, ಪೊಲೀಸ್ ಇಲಾಖೆ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಮಾತನಾಡಿ ಜಿಲ್ಲೆಯಲ್ಲಿ ಮಾರ್ಚ 1 ರಿಂದ ಮೂರನೇ ಹಂತದಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷದಿಂದ 59 ವರ್ಷದೊಳಗಿನ ಅನಾರೋಗ್ಯ ಹೊಂದಿರುವವರಿಗೆ ನೀಡಲಾಗುತ್ತಿದೆ. ಅಂತವರು ತಮ್ಮ ಆಧಾರ ಕಾರ್ಡನೊಂದಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.
ಕೋವಿಡ್ ಲಸಿಕೆಯನ್ನು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ 250 ರೂ.ಗಳ ನೀಡಿ ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ನವನಗರದ ಜಿಲ್ಲಾ ಆಸ್ಪತ್ರೆ ಮತ್ತು ಜಮಖಂಡಿ, ಮುಧೋಳ, ಬೀಳಗಿ, ಹುನಗುಂದ, ಬಾದಾಮಿ ಸರಕಾರಿ ತಾಲೂಕಾ ಆಸ್ಪತ್ರೆ, ಬಾಗಲಕೋಟೆಯ ಹಾನಗಲ್ ಕುಮಾರೇಶ್ವರ ಆಸ್ಪತ್ರೆ, ಕೆರೂಡಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಬಿ.ಜಿ.ಹುಬ್ಬಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ನವನಗರದ ಜಿಲ್ಲಾ ಆಸ್ಪತ್ರೆಗೆ ಸಂಸದ ಪಿ.ಸಿ.ಗದ್ದಿಗೌಡರ ತೆರಳಿ ಕೋವಿಡ್ ಲಸಿಕೆಯನ್ನು ಪಡೆದರು.