ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರವ ಬಣ ಬಡಿದಾಟ, ಕುರ್ಚಿ ಕಿತ್ತಾಟದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಭೇಟಿ, ಹಲವು ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕವೂ ಮಾಧ್ಯಮಗಳಿಗೆ ಉತ್ತರಿಸದೇ ಖರ್ಗೆ ಮೌನವಾಗೇ ಇದ್ದರು. ಇದೀಗ ಎಲ್ಲಾ ವಿದ್ಯಮಾನಗಳ ಬಗ್ಗೆ ಮಾಧ್ಯಮಗಳ ಎದುರು ಬಂದು ಮಾತನಾಡಿದ್ದಾರೆ. ನನ್ನತ್ರ ಹೇಳೋಕೆ ಏನೂ ಇಲ್ಲ, ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.
ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತೆ
ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಎದುರು ಬಂದು ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಏನೇ ತೀರ್ಮಾನ ಮಾಡಬೇಕಾದ್ರೂ ಅದನ್ನು ಮಾಡೋದು ಹೈಕಮಾಂಡ್ ಎಂದಿದ್ದಾರೆ. ಮಾಧ್ಯಮದವರು ನೀವು ಇಲ್ಲಿ ಬಂದಿದ್ದೀರಿ ಅಂತಾ ಬೇಸರ ಆಯ್ತು. ಅದಕ್ಕಾಗಿ ಬಂದು ನಿಮಗೆ ಹೇಳ್ತಿದ್ದೇನೆ ಎಂದಿದ್ದಾರೆ.
ಈಗ ಹೇಳಲು ನನ್ನ ಬಳಿ ಏನೂ ಇಲ್ಲ
ಏನು ಆದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಅಂತ ಖರ್ಗೆ ಹೇಳಿದ್ರು. ಈ ಮೂಲಕ ಕಾಂಗ್ರೆಸ್ ನಾಯಕತ್ವದ ಬದಲಾವಣೆ ಬಗ್ಗೆ ಕೊನೆಗೂ ಖರ್ಗೆ ಮೌನ ಮುರಿದಿದ್ದಾರೆ. ನನ್ನ ಹತ್ತಿರ ಹೇಳಲು ಏನೂ ಇಲ್ಲ. ದಯವಿಟ್ಟು ಯಾವುದೇ ವಿಚಾರದಲ್ಲೂ, ಈಗ ನಡೆದಿರುವ ವಿದ್ಯಮಾನಗಳ ಬಗ್ಗೆ ಹೇಳಲು ಏನು ಇಲ್ಲ ಎಂದಿದ್ದಾರೆ. ಏನೇ ಇದ್ದರು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇವಾಗ ನಡೆದಿರುವ ವಿದ್ಯಮಾನಗಳ ಬಗ್ಗೆ ಹೇಳೋಕೆ ನನ್ನ ಹತ್ತಿರ ಏನು ಇಲ್ಲ ಅಂತ ಖರ್ಗೆ ಪುನರುಚ್ಚರಿಸಿದ್ರು.
ರಾಹುಲ್ ಗಾಂಧಿ ಅಂಗಳಕ್ಕೆ ಕುರ್ಚಿ ಕದನದ ಚೆಂಡು!
ಇನ್ನು ರಾಜ್ಯ ಕಾಂಗ್ರೆಸ್‌ನಲ್ಲಿನ ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಬಣ ಬಡಿದಾಟದಿಂದ ಬೇಸರಗೊಂಡಿರೋ ಮಲ್ಲಿಕಾರ್ಜುನ್ ಖರ್ಗೆ, ಕುರ್ಚಿ ಕದನದ ಚೆಂಡನ್ನು ರಾಹುಲ್ ಗಾಂಧಿ ಅಂಗಳಕ್ಕೆ ಎಸೆದಿದ್ದಾರೆ. ರಾಹುಲ್ ಗಾಂಧಿ ಜೊತೆ ಚರ್ಚಿಸಿದ ನಂತರವೇ ಅಂತಿಮ ನಿರ್ಧಾರ ಎಂಬರ್ಥದಲ್ಲಿ ಮಾತನಾಡಿದ್ರು. ಸದ್ಯ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದು, ಅವರು ಬಂದ ಬಳಿಕವೇ ಈ ಕಿತ್ತಾಟಕ್ಕೆ ಬ್ರೇಕ್ ಬೀಳೋ ಸಾಧ್ಯತೆ ಇದೆ ಎನ್ನಲಾಗಿದೆ.