ನವದೆಹಲಿ: ದೇಶವನ್ನು ‘ತುಕ್ಡೇ ತುಕ್ಡೇ’ ಮಾಡಲು ಬಯಸಿರುವವರ ಜತೆ ಕಾಂಗ್ರೆಸ್ ಇದೆ ಎಂದು ಗಂಭೀರ ಆರೋಪ ಮಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರದ ವಿರುದ್ಧ ಕಿಡಿಕಾರಿದರು.
ಲೋಕಸಭೆಯಲ್ಲಿ ಬುಧವಾರ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರಕಾರವು ‘ಪ್ರತ್ಯೇಕತಾವಾದಿ’ ಮನಸ್ಥಿತಿಯನ್ನು ಬೆಳೆಸುತ್ತಿದೆ ಮತ್ತು ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆಯಾದ ಅನುದಾನದ ವಿಚಾರದಲ್ಲಿ ಸುಳ್ಳು ಮಾಹಿತಿಗಳನ್ನು ಹರಡಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರವು ಹಣಕಾಸು ಆಯೋಗದ ಶಿಫಾರಸಿನ ಅನ್ವಯ ಕರ್ನಾಟಕಕ್ಕೆ ಸಿಗಬೇಕಾದ ಎಲ್ಲಾ ಹಣವನ್ನೂ ರಾಜ್ಯಕ್ಕೆ ಸಕಾಲದಲ್ಲಿ ಬಿಡುಗಡೆ ಮಾಡಿದ್ದು, ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಸ್ಪಷ್ಟನೆ ನೀಡಿದ್ದು, ಕರ್ನಾಟಕಕ್ಕೆ ಮೂಲ ಸೌಕರ್ಯ ಅಭಿವೃದ್ಧಿಗಾಗಿ 50 ವರ್ಷಗಳ ಅವಧಿಗೆ 6,279.94 ಕೋಟಿ ರೂ ಬಡ್ಡಿ ರಹಿತ ಸಾಲವನ್ನು ಕೂಡ ಒದಗಿಸಲಾಗಿದೆ ಎಂದು ಅವರು ಮಾಹಿತಿ ಕೊಟ್ಟರು.
ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಣದಲ್ಲಿ ಅನ್ಯಾಯವಾಗಿದೆ ಮತ್ತು 15ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ಸಹ ಅನ್ಯಾಯ ಎಸಗಲಾಗಿದೆ ಎಂಬ ಕರ್ನಾಟಕ ಕಾಂಗ್ರೆಸ್ ಸರಕಾರದ ಆರೋಪವನ್ನು ನಿರ್ಮಲಾ ಸೀತಾರಾಮನ್ ಸಾರಾಸಗಟಾಗಿ ತಳ್ಳಿಹಾಕಿದರು.