ಬಿಹಾರ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ಇಂದು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಕಳೆದ ಮೂರು ದಿನಗಳಿಂದ ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಗೊಂದಲದ ನಡುವೆ ಸಿಎಂ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಮಹಾಮೈತ್ರಿಕೂಟ ತೊರೆದು ಇದೀಗ ಎನ್ ಡಿಎ ಸೇರ್ಪಡೆಯಾಗುವ ಮಾಹಿತಿ ಲಭ್ಯವಾಗಿದ್ದು, ಭಾನುವಾರ ಅವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಸಂಜೆಯೇ ನಿತೀಶ್ ಕುಮಾರ್ 9ನೇ ಬಾರಿಗೆ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಜೆಡಿಯು ಶಾಸಕಾಂಗ ಪಕ್ಷದ ಸಭೆಯ ನಂತರ ಅವರು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದು, ಬಿಹಾರದಲ್ಲಿ ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿ ಮುರಿದು ಬಿದ್ದಿದೆ. ನಿತೀಶ್ ಕುಮಾರ್ ಅವರು ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.ಹೊಸ ಸರ್ಕಾರದಲ್ಲಿ ನಿತೀಶ್ ಕುಮಾರ್ ಸಿಎಂ ಆಗಿ ಉಳಿಯಲಿದ್ದಾರೆ. ಇವರ ಜೊತೆಗೆ ಇಬ್ಬರು ಬಿಜೆಪಿ ನಾಯಕರು ಉಪ ಮುಖ್ಯಮಂತ್ರಿಯಾಗಲಿದ್ದಾರೆ.
ಉಪ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಸಸ್ಪೆನ್ಸ್ ಉಳಿದಿದ್ದು, ಸುಶೀಲ್ ಮೋದಿ ಮತ್ತು ರೇಣು ದೇವಿ ಉಪ ಮುಖ್ಯಮಂತ್ರಿಯಾಗಬಹುದು ಎಂದು ಮೂಲಗಳು ಹೇಳಿದ್ದು, ಇಂದು ಸಂಜೆ 4 ಗಂಟೆಗೆ ನೂತನ ಸರ್ಕಾರದಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಿತೀಶ್ ಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಇದು 9ನೇ ಬಾರಿ. 6 ರಿಂದ 8 ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.