ಕೊಟ್ಟೂರು: ಕೂಲಿ ಇತರೆ ಉದ್ದೇಶಕ್ಕೆ ಹಣ ವ್ಯಯಿಸಿ ಬೇಸಿಗೆ ಹಂಗಾಮಿನಲ್ಲಿ ಬೆಳೆದ ಈರುಳ್ಳಿ ಬೆಳೆಗೆ ಹೆಚ್ಚು ಲಾಭಾಂಶ ಸಿಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದು ನಷ್ಟಕ್ಕೆ ಕಾರಣವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಬೋರ್‌ವೆಲ್ ಹೊಂದಿರುವ ರೈತರು ಬೇಸಿಗೆಯಲ್ಲಿ ಲಭ್ಯವಿದ್ದ ನೀರನ್ನು ಬಳಕೆ ಮಾಡಿಕೊಂಡು ಈರುಳ್ಳಿ ಬೆಳೆದಿದ್ದಾರೆ. ಬೀಜ, ಗೊಬ್ಬರ, ಔಷಧ, ಕೂಲಿ ಸೇರಿ ಎಕರೆಗೆ 25 ರಿಂದ 30 ಸಾವಿರ ರೂ. ಖರ್ಚು ಮಾಡಿದ್ದಾರೆ. ಆದರೆ ಸದ್ಯದ ಬೆಲೆಯಲ್ಲಿ ಮಾರಾಟ ಮಾಡಿದರೆ ನಷ್ಟ. ದಾಸ್ತಾನು ಮಾಡಿಟ್ಟುಕೊಳ್ಳುವುದೂ ಕಷ್ಟಕರ.
ಹಂಗಾಮಿನಲ್ಲಿ ಬೋರ್‌ವೆಲ್ ನೀರು ಆಶ್ರಯಿಸಿ ತಾಲೂಕಿನ ಕೋಗಳಿ ಹೋಬಳಿಯಲ್ಲಿ 367.36 ಹೆಕ್ಟೆರ್‌ನಲ್ಲಿ ಮತ್ತು ಕೊಟ್ಟೂರು ಹೋಬಳಿಯಲ್ಲಿ 1133.49 ಹೆಕ್ಟೆರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬಿತ್ತನೆ ಮಾಡಿದ್ದರು. ಎಕರೆಗೆ 85 ರಿಂದ 90 ಕ್ವಿಂಟಲ್‌ವರೆಗೆ ಈರುಳ್ಳಿ ಬೆಳೆದಿದ್ದಾರೆ.
ಕ್ವಿಂಗೆ 4ಸಾವಿರ ರೂ. ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ. ಕ್ವಿಂಟಲ್‌ಗೆ 1100 ರಿಂದ 1200 ರೂ.ಗಳಷ್ಟು ಬೆಲೆ ಇರುವಾಗ, ಬೆಂಗಳೂರು ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುವುದೂ ಕಷ್ಟ. ಹೀಗಾಗಿ ರೈತರು ಸ್ಥಳೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಇನ್ನು ಹಲವು ರೈತರು ಬೆಲೆ ಏರಿಕೆ ನಿರೀಕ್ಷೆಯಲ್ಲಿ ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ.
ಈರುಳ್ಳಿ ಬೆಳೆದಿರುವ ರೈತರು ಮಾರುಕಟ್ಟೆಯಲ್ಲಿ ನಿರೀಕ್ಷಿತ ಧಾರಣೆ ಸಿಗದೇ ಕಂಗಾಲಾಗಿದ್ದಾರೆ. ಬೆಳೆಗಾಗಿ ಮಾಡಿದ ಖರ್ಚಿನ ಹಣ ಕೈಗೆ ಸಿಕ್ಕರೆ ಸಾಕು ಹೆಚ್ಚಿನ ಲಾಭವೇ ಬೇಡ ಎನ್ನುತ್ತಿದ್ದಾರೆ. ಆದರೆ ಕುಸಿದಿರುವ ಈರುಳ್ಳಿ ಬೆಲೆ ಈವರೆಗೂ ಏರಿಕೆ ಆಗದಿರುವುದು ರೈತರಲ್ಲಿ ಕಣ್ಣೀರು ತರಿಸಿದೆ.
ಮುಂಗಾರಿನಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ 3500 ರಿಂದ 4000 ರೂ.ವರೆಗೆ ಆಗಿತ್ತು. ಆದರೆ ಹಿಂಗಾರು ಹಂಗಾಮಿನಲ್ಲಿ ಧಾರಣೆ ಕ್ವಿಂಟಾಲ್‌ಗೆ 1100 ರಿಂದ 1200 ಗಳಿಗೆ ಕುಸಿದಿದೆ.
ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆ ಏರಿಕೆಯಾಗದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ರೈತರು ಸ್ಥಳೀಯವಾಗಿ ಮಾರಾಟ ಮಾಡಿ ಕೈಗೆ ಸಿಕ್ಕಿದ್ದೇ ಲಾಭ ಎಂದು ಕೊಂಡರೆ ಇನ್ನು ಹಲವರು ಬೆಲೆ ಏರಿಕೆ ನಿರೀಕ್ಷೆಯಲ್ಲಿ ತಮ್ಮಲ್ಲಿಯೇ ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ.