This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics News

ರೈತವಿರೋಧಿಗಳಿಂದ ಕೃಷಿ ಸುಧಾರಣಾ ಕಾಯಿದೆಗಳಿಗೆ ವಿರೋಧ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್

ನಿಮ್ಮ ಸುದ್ದಿ ಬೆಂಗಳೂರು

ರೈತವಿರೋಧಿ ಶಕ್ತಿಗಳು ಕೃಷಿ ಸುಧಾರಣಾ ಕಾಯಿದೆಗಳಿಗೆ ಬೆಂಬಲ ನೀಡುತ್ತಿವೆ. ಅವರಿಗೆ ಕೃಷಿ ಕಾಯಿದೆಗಳ ಕೊರತೆಯ ಕುರಿತು ಪ್ರಶ್ನಿಸಿದರೆ ಅವರು ನಿರುತ್ತರರಾಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳೂ ಆದ ಶ್ರೀ ಅರುಣ್ ಸಿಂಗ್ ಅವರು ತಿಳಿಸಿದರು.

ಹಾಸನದಲ್ಲಿ ಗುರುವಾರ ಬಿಜಪಿ ರಾಜ್ಯ ಪ್ರಕೋಷ್ಠಗಳ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಸುಧಾರಣಾ ಕಾಯಿದೆಗಳ ವಿರುದ್ಧ ನಡೆಯತ್ತಿರುವ ರೈತರ ಆಂದೋಲನದ ಹಿಂದೆ ಕಮ್ಯೂನಿಸ್ಟ್, ಕಾಂಗ್ರೆಸ್ ನಾಯಕರ ಷಡ್ಯಂತ್ರ ಇದೆ. ಕಾಂಗ್ರೆಸ್ ಮತ್ತು ಕಮ್ಯೂನಿಸ್ಟರು ದಲ್ಲಾಳಿಗಳಿಂದ ಪ್ರಭಾವಿತರಾಗಿದ್ದಾರೆ. ಕಾಯಿದೆಗಳಲ್ಲಿ ಏನು ಕೊರತೆ ಇದೆ ಎಂದರೆ ಉತ್ತರ ಸಿಗುತ್ತಿಲ್ಲ. ಈ ಕಾಯಿದೆಯಗಳ ಉತ್ತಮ ಅಂಶಗಳನ್ನು ಕಾರ್ಯಕರ್ತರು ಜನರ ಮುಂದಿಡಬೇಕು ಎಂದು ತಿಳಿಸಿದರು.

ಶೇ 99 ರೈತರು ಕೇಂದ್ರ ಸರಕಾರದ ಕೃಷಿ ಸುಧಾರಣಾ ಕಾಯಿದೆಗಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ಜಾರಿಯಾಗಿದೆ. ರೈತರ ಉತ್ಪನ್ನ ಖರೀದಿಸುವವರ ಸಂಖ್ಯೆ ಹೆಚ್ಚಿದರೆ ಹೆಚ್ಚು ಬೆಲೆ ಸಿಗುತ್ತದೆ ಎಂದು ವಿವರಿಸಿದರು.

ಈ ಕಾಯಿದೆಯಿಂದ ರೈತರ ಉತ್ಪನ್ನಗಳಿಗೆ ಹೆಚ್ಚು ಬೆಲೆ ಲಭಿಸಲಿದೆ. ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಪ್ರಮಾಣ ಹೆಚ್ಚಾಗಿದೆ. ಕೃಷಿಕರಿಗೆ ಸ್ವಾತಂತ್ರ್ಯ ತರುವ ಸುಧಾರಣಾ ಕಾಯಿದೆಗಳು. ದೇಶದ ಅಭಿವೃದ್ಧಿಗೆ ಪೂರಕ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಳಕ್ಕೆ ಸಹಕಾರಿ ಎಂದು ತಿಳಿಸಿದರು.

ನಮ್ಮ ಜನಪ್ರಿಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವವಂದ್ಯವನ್ನಾಗಿ ಮಾಡುವತ್ತ ಮುನ್ನಡೆಸಿದ ಅಪರೂಪದ ನಾಯಕರು. ಅವರ ಸಮರ್ಥ ಕಾರ್ಯವೈಖರಿಯಿಂದ ಎಲ್ಲಾ ದೇಶಗಳೂ ಭಾರತದತ್ತ ನೋಡುವಂತಾಗಿದೆ. ಈ ಬಾರಿ ಕೇಂದ್ರ ಬಜೆಟ್‍ನಡಿ ಮೂಲಸೌಕರ್ಯ, ಆರೋಗ್ಯ, ಹೆದ್ದಾರಿಗಳ ಅಭಿವೃದ್ಧಿಯಂಥ ವಿಚಾರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಎಲ್ಲರಿಗೂ ಸ್ವಚ್ಛ ಕುಡಿಯುವ ನೀರಿನ ಸೌಕರ್ಯ, ಉತ್ತಮ ಮನೆ ನೀಡಲು ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದರಿಂದ ಸ್ವಾವಲಂಬಿ- ಆತ್ಮನಿರ್ಭರ ಭಾರತದ ಕನಸು ನನಸಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರಿಗೆ ಕೃಷಿ ಎಂದರೆ ಏನೆಂದೇ ಗೊತ್ತಿಲ್ಲ. ಬೇಳೆಕಾಳುಗಳ ವ್ಯತ್ಯಾಸ ಗೊತ್ತಿಲ್ಲ ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ಶ್ರೀ ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಾಧು ಸಂತರನ್ನು ಗೌರವಿಸುವ ಸರಕಾರವಿದು. ಗೋಹತ್ಯಾ ನಿಷೇಧವನ್ನು ಈಗಾಗಲೇ ಜಾರಿಗೊಳಿಸಿದೆ. ಇದು ಬೇರೆ ಸರಕಾರದಿಂದ ಸಾಧ್ಯವಿತ್ತೇ ಎಂದು ಪ್ರಶ್ನಿಸಿದರು.
ಇನ್ನಷ್ಟು ಜನರನ್ನು ಪಕ್ಷದ ಸಂಘಟನೆಗೆ ಜೋಡಿಸಬೇಕು. ಸಮಾಜಸೇವೆ ಮೂಲಕ ಪಕ್ಷವನ್ನು ಬಲಪಡಿಸಬೇಕು. ಈ ಶತಮಾನ ಭಾರತದ್ದಾಗಲಿದೆ. ಮುಂದಿನ ದಿನಗಳಲ್ಲಿ ಭಾರತವು ವಿಶ್ವದ ನೇತೃತ್ವ ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿ, ಪಟ್ಟಾಭಿಷೇಕ ಇಲ್ಲವೆಂದು ತಂದೆ ಹೇಳಿದಾಗ ಶ್ರೀರಾಮ ವಿಚಲಿತರಾಗಲಿಲ್ಲ. ರಾಮ ಕಾಡಿಗೆ ಹೋದುದು ನಮಗೆ ಪ್ರೇರಣೆ. ಆದರೆ, ಅಧಿಕಾರಕ್ಕಾಗಿ ಪಾರ್ಟಿ ಬಿಟ್ಟವರು, ಮುಖ್ಯಮಂತ್ರಿ ಆಗಬೇಕೆಂದು ರಾಜಕೀಯ ಗುರುವನ್ನು ತುಳಿದ ಜನ, ಅಯೋಧ್ಯೆಯಲ್ಲಿ ರಾಮನಿಗೆ ಮಂದಿರ ಬೇಕೇ ಎನ್ನುತ್ತಾರೆ. ಇದೆಂಥಾ ಮೂರ್ಖತನ ಎಂದು ಪ್ರಶ್ನಿಸಿದರು.

ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವರು ಅಯೋಧ್ಯೆ ರಾಮನ ಮಂದಿರಕ್ಕೆ ನಿಧಿ ಸಂಗ್ರಹದ ವಿರುದ್ಧ ಮಾತನಾಡುತ್ತಿದ್ದಾರೆ. ಅಧಿಕಾರ ಇಲ್ಲದಾಗ ಸ್ವಹಿಂದ ಎನ್ನುತ್ತೀರಿ, ಅಧಿಕಾರಕ್ಕಾಗಿ ಅಹಿಂದ ಎನ್ನುತ್ತೀರಿ ಎಂದು ಟೀಕಿಸಿದರು.

ಇನ್ನೊಬ್ಬರು ಹಾಸನದವರು. ಜ್ಯೋತಿಷ್ಯ ಇಲ್ಲದೇ ಮುಂದೆ ಹೋಗದವರು. ನಮ್ಮ ಮನೆಗೆ ನಿಧಿ ಸಂಗ್ರಹಕ್ಕೆ ಬಂದವರಲ್ಲಿ ಗೂಂಡಾಗಳಿದ್ದರು ಎನ್ನುತ್ತಾರೆ. ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್‍ನವರು ಗೂಂಡಾಗಳಲ್ಲ ಎಂಬುದು ಅವರಿಗೆ ನೆನಪಿರಲಿ ಎಂದು ತಿಳಿಸಿದರು.

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತಿಳಿಸಿದೆ. ವಿಶ್ವ ಹಿಂದೂ ಪರಿಷತ್, ಬಿಜೆಪಿ, ಆರೆಸ್ಸೆಸ್‍ನವರು ಈ ಮಂದಿರ ನಿರ್ಮಿಸುತ್ತಿಲ್ಲ. ಈ ಮುಖಂಡರು ಮಂದಿರ ನಿರ್ಮಾಣದ ಕುರಿತು ಅಪಸ್ವರ ಎತ್ತುವ ಮೂಲಕ ಸುಪ್ರೀಂ ಕೋರ್ಟ್, ದೇಶದ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಗೂಂಡಾಗಿರಿಯ ರಾಜಕೀಯದವರಿಗೆ ಕನಸಿನಲ್ಲೂ ಗೂಂಡಾಗಳು ಕಾಣುತ್ತಾರೆ. ಆದರೆ ನಮ್ಮದು ರಾಷ್ಟ್ರ ನಿರ್ಮಾಣದ ರಾಜಕಾರಣ. ಆದ್ದರಿಂದ ನಮಗೆ ರಾಷ್ಟ್ರೀಯವಾದಿ ಕಾರ್ಯಕರ್ತರೇ ಎಲ್ಲೆಡೆ ಕಾಣಸಿಗುತ್ತಾರೆ ಎಂದರು.

ಕಾಂಗ್ರೆಸ್ ನಾಯಕರಿಂದ ಸ್ವಂತ ಮನೆಯ ಗರೀಬಿ ಹಠಾವೋ ಆಗಿದೆ. ಇದರಿಂದಾಗಿ ಕಾಂಗ್ರೆಸ್ ಮುಖಂಡರನೇಕರು ಭ್ರಷ್ಟಾಚಾರದ ಕಾರಣಕ್ಕಾಗಿ ಜಾಮೀನು ಪಡೆದು ಹೊರಗಿದ್ದಾರೆ ಎಂದು ವಿವರಿಸಿದರು.

ಜಾತ್ಯತೀತವಾದದ ಪ್ರತಿಪಾದಕರು ದೇಶದಲ್ಲಿ ಒಂದೇ ಒಂದು ದೇವಸ್ಥಾನಕ್ಕೆ ಶಿಲಾನ್ಯಾಸ ಮಾಡಲಿಲ್ಲ. ಆದರೆ, ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು ಶ್ರೀರಾಮನ ಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದಾರೆ ಎಂದು ವಿವರಿಸಿದರು. ಜನಪರ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಮತ್ತು ನುಡಿದಂತೆ ನಡೆದ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಅವರ ಸರಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಿ ಎಂದು ಅವರು ತಿಳಿಸಿದರು.

ಪಕ್ಷದ ಸೂಚನೆಯಂತೆ ಮನೆ ಮನೆ ಸಂಪರ್ಕ ಕಾರ್ಯಕ್ಕೆ ತೆರಳಿದ್ದೆವು. ಕಾಂಗ್ರೆಸ್ಸಿಗರೊಬ್ಬರ ಮನೆ ಬಿಟ್ಟು ಮುಂದೆ ಹೋದಾಗ ಮಹಿಳೆಯೊಬ್ಬರು ಚಪ್ಪಾಳೆ ತಟ್ಟಿ ವಾಪಸ್ ಕರೆದರು. ಅವರ ಮನೆಯಲ್ಲಿ ದೇವರ ಕೋಣೆಯಲ್ಲಿ ನರೇಂದ್ರ ಮೋದಿ ಅವರ ಪುಸ್ತಕವನ್ನಿಟ್ಟಿದ್ದರು. ಇನ್ನೊಮ್ಮೆ ಜನ್ಮ ಇರುವುದಾದರೆ ನರೇಂದ್ರ ಮೋದಿ ಪ್ರಧಾನಿ ಆಗಿರುವ ದೇಶದಲ್ಲಿ ಹುಟ್ಟಿಸು ಮತ್ತು ಶ್ರೇಷ್ಠ ಸಾಧಕರಾದ ಮೋದಿ ಅವರಿಗೆ ಆಯುಷ್ಯ ಕೊಡು ಎಂದು ಪ್ರಾರ್ಥಿಸುತ್ತಿರುವುದಾಗಿ ಕಾಂಗ್ರೆಸಮ್ಮ ಹೇಳಿದರು. ದೇಶದಲ್ಲಿ ಪರಿವರ್ತನೆ ಆಗುತ್ತಿರುವುದರ ಸಂಕೇತವಿದು ಎಂದು ಹೇಳಿದರು.

ರಾಜ್ಯ ಅಬಕಾರಿ ಮತ್ತು ತೋಟಗಾರಿಕೆ ಇಲಾಖೆ ಸಚಿವರಾದ ಶ್ರೀ ಗೋಪಾಲಯ್ಯ, ಲೋಕಸಭಾ ಸದಸ್ಯರಾದ ಶ್ರೀ ಶಿವಕುಮಾರ್ ಉದಾಸಿ, ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣ್, ಶಾಸಕರಾದ ಪ್ರೀತಂ ಗೌಡ, ವಿಧಾನಪರಿಷತ್ ಸದಸ್ಯರಾದ ಶ್ರೀ ಪ್ರತಾಪಸಿಂಹ ನಾಯಕ್, ಜಿಲ್ಲಾಧ್ಯಕ್ಷರಾದ ಶ್ರೀ ಎಚ್.ಕೆ.ಸುರೇಶ್, ಪ್ರಕೋಷ್ಠಗಳ ಸಂಚಾಲಕರಾದ ಶ್ರೀ ಭಾನುಪ್ರಕಾಶ್, ಸಹ ಸಂಚಾಲಕರಾದ ಶ್ರೀ ಶಿವಯೋಗಿ ಸ್ವಾಮಿ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

Nimma Suddi
";