ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆಯು ಮಂಗಳವಾರ ಸಂಸತ್‌ನ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ದಾರಿಮಾಡಿಕೊಟ್ಟಿತು.
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ ‘ವೌನ ವ್ರತ’ ಮುರಿಯಲು ಅವಿಶ್ವಾಸ ನಿಲುವಳಿ ಮಂಡಿಸಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
ಅವಿಶ್ವಾಸ ನಿಲುವಳಿ ಮಂಡಿಸಿದ್ದ ಗೊಗೊಯ್ ಅವರು ಚರ್ಚೆ ಆರಂಭಿಸಿ, ‘‘ಒನ್ ಇಂಡಿಯಾ ಎಂದು ಹೇಳುವ ಸರಕಾರವು ಇಂದು ಎರಡು ಮಣಿಪುರಗಳನ್ನು ಸೃಷ್ಟಿಸಿದೆ. ಒಂದು ಬೆಟ್ಟದಲ್ಲಿ, ಮತ್ತೊಂದು ಕಣಿವೆಯಲ್ಲಿದೆ. ಮಣಿಪುರ ಹೊತ್ತಿ ಉರಿದರೆ, ಇಡೀ ದೇಶವೇ ಹೊತ್ತಿ ಉರಿದಂತೆ. ಹಾಗೆಯೇ ಮಣಿಪುರ ಒಡೆದರೆ, ಇಡೀ ಭಾರತವೇ ಇಬ್ಭಾಗವಾಗುತ್ತದೆ. ಹಿಂಸೆಯಲ್ಲಿ ಬೆಂದುಹೋಗಿರುವ ಈಶಾನ್ಯ ರಾಜ್ಯದ ಗಾಯಕ್ಕೆ ನ್ಯಾಯದ ಮುಲಾಮು ಹಚ್ಚುವ ಅಗತ್ಯವಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಬಂದು ಮಾತನಾಡಬೇಕು ಎಂಬುದು ನಮ್ಮ ಆಗ್ರಹವಾಗಿತ್ತು. ಆದರೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಈ ವಿಚಾರದ ಬಗ್ಗೆ ಮಾತನಾಡದೇ ‘ವೌನ ವ್ರತ’ ಪಾಲಿಸಿದರು. ಅದನ್ನು ಮುರಿಯಲೆಂದೇ ನಾವು ಅವಿಶ್ವಾಸ ನಿಲುವಳಿ ಮಂಡಿಸಿದೆವು,’’ ಎಂದು ಕುಟುಕಿದರು.
‘‘ಗೋಧ್ರೋತ್ತರ ಗಲಭೆ ಸಂದರ್ಭದಲ್ಲಿ ಅಂದಿನ ಗುಜರಾತ್ ಸಿಎಂ ಆಗಿದ್ದ ಮೋದಿ ಅವರಿಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ‘ರಾಜಧರ್ಮ’ ಪಾಲಿಸುವಂತೆ ಸೂಚಿಸಿದ್ದರು. ಆದರೆ ನಮ್ಮ ಪ್ರಧಾನಿ ಈಗ ‘ವೌನ ವ್ರತ’ ಪಾಲಿಸುತ್ತಿದ್ದಾರೆ,’’ ಎಂದು ವಾಗ್ದಾಳಿ ನಡೆಸಿದರು.
ಯಾವ ಪುರುಷಾರ್ಥಕ್ಕೆ: ‘‘ಸಂಘರ್ಷದಲ್ಲಿ ಮಣಿಪುರ ಬೆಂದು ಹೋಗುತ್ತಿದ್ದರೂ ಆ ಬಗ್ಗೆ ಮಾತನಾಡಲು ಪ್ರಧಾನಿ ಮೋದಿ ಸುಮಾರು 80 ದಿನ ತೆಗೆದುಕೊಂಡರು. ಅದೂ ಕೂಡ ಕಾಟಾಚಾರಕ್ಕೆ ಎಂಬಂತೆ ಕೇವಲ 30 ಸೆಕೆಂಡ್‌ನಲ್ಲಿ ಮಣಿಪುರ ವಿಷಯ ಪ್ರಸ್ತಾಪಿಸಿ ಕೈತೊಳೆದುಕೊಂಡಿದ್ದರು. ಇದು ಯಾವ ಪುರುಷಾರ್ಥಕ್ಕೆ?,’’ ಎಂದು ಗೊಗೊಯ್ ಖಾರವಾಗಿ ಪ್ರಶ್ನಿಸಿದರು.
ಸೋನಿಯಾಗೆ ಎರಡು ಟಾಸ್ಕ್: ದುಬೆ ಟಾಂಗ್
ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
‘‘ರಾಜಕೀಯದಲ್ಲಿ ನೆಲೆಗೊಳ್ಳಲು ಪುತ್ರ ರಾಹುಲ್‌ಗೆ ಭದ್ರ ಅಡಿಪಾಯ ಹಾಕಲು ಹಾಗೂ ಅಳಿಯ ರಾಬರ್ಟ್ ವಾದ್ರಾಗೆ ಬೇಕಾದ ಉಡುಗೊರೆ ನೀಡುವ ಎರಡು ಪ್ರಮುಖ ಜವಾಬ್ದಾರಿ ಸೋನಿಯಾ ಗಾಂಧಿ ಅವರ ಮೇಲಿದೆ. ಅವಿಶ್ವಾಸ ನಿಲುವಳಿ ಹಿಂದಿನ ಉದ್ದೇಶ ಇದುವೇ ಆಗಿದೆ,’’ ಎಂದು ದುಬೆ ಟಾಂಗ್ ನೀಡಿದರು. ಈ ವೇಳೆ ಸದನದಲ್ಲಿ ಸೋನಿಯಾ ಹಾಜರಿದ್ದರು.
ಬಡವನ ಮಗನ ವಿರುದ್ಧ: ಒಂದು ಹಂತದಲ್ಲಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ನಿಶಿಕಾಂತ್ ದುಬೆ, ‘‘ಈ ಅವಿಶ್ವಾಸ ನಿಲುವಳಿ ಸಮಾಜದ ಕಲ್ಯಾಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಬಡವನ ಮಗನ (ಪ್ರಧಾನಿ ನರೇಂದ್ರ ಮೋದಿ) ವಿರುದ್ಧವಾಗಿದೆ. ಬಡವರಿಗೆ ಮನೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕಲ್ಪಿಸಿಕೊಟ್ಟವರ ವಿರುದ್ಧವಾಗಿದೆ. ಸರ್ವರ ಬಾಳಲ್ಲೂ ಬೆಳಕನ್ನು ಮೂಡಿಸಲು ಯತ್ನಿಸಿದವರ ವಿರುದ್ಧವಾಗಿದೆ,’’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹನುಮಾನ್ ಚಾಲೀಸಾ ಪಠಿಸಿದ ಶಿಂಧೆ ಪುತ್ರ
ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರ ಪುತ್ರರೂ ಆಗಿರುವ ಸಂಸದ ಶ್ರೀಕಾಂತ್ ಶಿಂಧೆ ಲೋಕಸಭೆಯಲ್ಲಿ ಹನುಮಾನ್ ಚಾಲೀಸಾ ಪಠಿಸುವ ಪ್ರಯತ್ನ ಮಾಡಿ ಸುದ್ದಿಯಾದರು. ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಹಿಂದಿನ ‘ಮಹಾ ವಿಕಾಸ್ ಅಘಾಡಿ’ ಸರಕಾರದ ನಿರ್ಧಾರಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ‘‘ಮುಂಬಯಿನಲ್ಲಿ ಉದ್ಧವ್ ನಿವಾಸದ ಎದುರು ಹಿಂದೆ ಹನುಮಾನ್ ಚಾಲೀಸಾ ಪಠಿಸಲು ಮುಂದಾಗಿದ್ದ ಸಂಸದೆ ನವನೀತ್ ರಾಣಾ ಹಾಗೂ ಅವರ ಪತಿ ಶಾಸಕ ರವಿ ರಾಣಾ ಅವರನ್ನು ಬಂಧಿಸಿ ತೊಂದರೆ ನೀಡಲಾಗಿತ್ತು,’’ ಎಂದು ಬೇಸರ ವ್ಯಕ್ತಪಡಿಸುತ್ತಾ ‘‘ನನಗೂ ಹನುಮಾನ್ ಚಾಲೀಸಾ ಗೊತ್ತಿದೆ,’’ ಎಂದು ಹೇಳುತ್ತಲೇ ಪಠಿಸಲು ಮುಂದಾದರು. ಆಗ ಸ್ಪೀಕರ್, ‘‘ಅದನ್ನು ನಿಲ್ಲಿಸಿ ನಿಮ್ಮ ಭಾಷಣ ಮುಂದುವರಿಸಿ,’’ ಎಂದು ಸೂಚಿಸಿದ್ದರಿಂದ ಅರ್ಧಕ್ಕೆ ನಿಲ್ಲಿಸಿದರು.
ರಾಹುಲ ಕಾಲೆಳೆದ ಸಚಿವ ಜೋಶಿ
ಗೌರವ್ ಗೊಗೊಯ್ ಅವರ ಮಾತುಗಳ ಮೂಲಕ ಲೋಕಸಭೆಯಲ್ಲಿ ಚರ್ಚೆ ಶುರುವಾಗಿದ್ದೇನೋ ಸರಿ, ಆದರೆ ಸ್ಪೀಕರ್ ಓಂ ಬಿರ್ಲಾ ಅವರು ಗೊಗೊಯ್ ಅವರಿಗೆ ಮಧ್ಯಾಹ್ನದ ವೇಳೆಗೆ ಚರ್ಚೆ ಆರಂಭಿಸಲು ಸೂಚಿಸಿದರು. ಆಗ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಎದ್ದು ನಿಂತು, ಗೊಗೊಯ್ ಬದಲಿಗೆ ರಾಹುಲ್ ಗಾಂಧಿ ಮಾತನಾಡಲಿದ್ದಾರೆಂದು ಸ್ಪೀಕರ್ ಕಚೇರಿಗೆ 11.55ಕ್ಕೆ ಪತ್ರ ಬಂದಿದೆ ಎಂದು ಮಾಹಿತಿ ನೀಡಿದರು. ಒಂದು ಹಂತದಲ್ಲಿ ಜೋಶಿ ಅವರು, ‘‘ರಾಹುಲ್ ಮಂಗಳವಾರ ಸದನದಲ್ಲಿ ಮಾತನಾಡುತ್ತಾರೆಂದು ಕಾಂಗ್ರೆಸ್ಸಿಗರು ಹೇಳಿಕೊಂಡು ಓಡಾಡುತ್ತಿದ್ದರು. ಎಲ್ಲಿ ಹೋಯಿತು ಅವರ ಪೌರುಷ? ಏಕೆ ಮಾತನಾಡುತ್ತಿಲ್ಲ? ಅವರು ಹಿಂದೆ ಸರಿದದ್ದು ಏಕೆ? ನಿಜವಾಗಿಯೂ ರಾಹುಲ್ ಮಾತು ಕೇಳಲು ನಾವೆಲ್ಲಾ ಉತ್ಸುಕರಾಗಿದ್ದೇವೆ,’’ ಎಂದು ಕಾಲೆಳೆದರು. ಜೋಶಿ ಅವರ ಈ ಮಾತಿನೊಂದಿಗೆ ಸದನದಲ್ಲಿ ಕೆಲಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
ಸಿದ್ದೇಶ್ವರ ಹೆಸರು ಪ್ರಸ್ತಾಪ
ಲೋಕಸಭೆಯಲ್ಲಿ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿಲುವಳಿ ಚರ್ಚೆ ವೇಳೆ ದಾವಣಗೆರೆ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮನೆ ಮೇಲೆ ನಡೆದ ಐಟಿ ದಾಳಿ ವಿಚಾರ ಪ್ರಸ್ತಾಪವಾಯಿತು. ನಿಲುವಳಿ ಚರ್ಚೆ ಮೇಲೆ ಮಾತನಾಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ‘‘ಐಟಿ, ಇಡಿ, ಸಿಬಿಐ ಕೇವಲ ಪ್ರತಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡುತ್ತಿವೆ. ಬಿಜೆಪಿ ನಾಯಕರ ತಂಟೆಗೆ ಹೋಗುವುದಿಲ್ಲ ಎಂದು ಆರೋಪಿಸುತ್ತಿವೆ. ಆದರೆ, ಗೊತ್ತಿರಲಿ ನಮ್ಮ ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಮನೆ ಮೇಲೆ 2017ರಲ್ಲಿ ಐಟಿ ದಾಳಿ ನಡೆದಿತ್ತು. ಕೋರ್ಟ್ ಮೆಟ್ಟಿಲೇರಿ ಐಟಿ ದಾಳಿ ಬಗ್ಗೆ ಅವರು ಪ್ರಶ್ನೆ ಮಾಡಲಿಲ್ಲಘಿ. ಮೋದಿಜಿ ಕೂಡ ತಮ್ಮ ಪಕ್ಷದ ಸಂಸದರು ಎಂದು ರಕ್ಷಣೆ ಮಾಡಲಿಲ್ಲಘಿ. ಬಳಿಕ ಸಿದ್ದೇಶ್ವರ್ ಅವರು 80 ಕೋಟಿ ರೂ. ತೆರಿಗೆ ಪಾವತಿ ಮಾಡಿ ಶುದ್ಧಹಸ್ತರಾದರು. ಆದರೆ, ಗಾಂಧಿ ಕುಟುಂಬ ತೆರಿಗೆ ಪಾವತಿ ಮಾಡುವಂತೆ ಆದಾಯ ತೆರಿಗೆ ಇಲಾಖೆ ಕಳುಹಿಸಿದ್ದ ಒಂದು ನೋಟಿಸ್ ಪ್ರಶ್ನಿಸಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿತ್ತು. ಇದೇ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಇರುವ ವ್ಯತ್ಯಾಸ,’’ ಎಂದು ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಅವರಿಗೆ ಅಧಿಕೃತ ನಿವಾಸ ‘ನಂ. 12, ತುಘಲಕ್ ಲೇನ್’ ಬಂಗಲೆ
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಲೋಕಸಭೆ ಸದಸ್ಯತ್ವ ಮರಳಿ ಪಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಧಿಕೃತ ನಿವಾಸ ‘ನಂ. 12, ತುಘಲಕ್ ಲೇನ್’ ಬಂಗಲೆಯನ್ನು ಪುನಃ ಹಂಚಿಕೆ ಮಾಡಲಾಗಿದೆ.
‘ಮೋದಿ ಉಪನಾಮ’ ಪ್ರಕರಣದಲ್ಲಿ ಗುಜರಾತ್‌ನ ಸೂರತ್ ಕೋರ್ಟ್‌ನಿಂದ 2 ವರ್ಷಗಳ ಸೆರೆವಾಸ ಶಿಕ್ಷೆಗೆ ಗುರಿಯಾದ ಬಳಿಕ ಜನಪ್ರತಿನಿಧಿ ಕಾಯಿದೆ ಅನುಸಾರ ಲೋಕಸಭೆ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಏಪ್ರಿಲ್‌ನಲ್ಲಿ ನಂ. 12, ತುಘಲಕ್ ಲೇನ್ ನಿವಾಸವನ್ನು ತೊರೆದಿದ್ದರು. ಸೂರತ್ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಸುಪ್ರೀಂ ಕೋರ್ಟ್, ಅಧೀನ ನ್ಯಾಯಾಲಯದ ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿದ ಬಳಿಕ ಅವರ ಸಂಸತ್ ಸದಸ್ಯತ್ವ ಮರುಸ್ಥಾಪನೆಯಾಗಿದೆ.