ನಿಮಗಿಂತ ಹೆಚ್ಚು ಪ್ರತಿಭಾವಂತರ ಬಳಿ ಸ್ನೇಹ ಬೆಳೆಸಿ, ಅವರಿಂದ ಕಲಿಯಲು ಪ್ರಯತ್ನಿಸಿ ಆದರೆ ಅಸೂಯೆ ಬೆಳೆಸಿಕೊಳ್ಳಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮಕ್ಕಳಿಗೆ ಸಲಹೆ ನೀಡಿದ್ದಾರೆ.
ಪರೀಕ್ಷಾ ಪೇ ಚರ್ಚಾ 7ನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಮೋದಿ, ನೀವು ನಿಮ್ಮ ಮೇಲೆ ನಂಬಿಕೆ ಇಡಬೇಕು, ಎಂದೂ ಸ್ನೇಹಿತರ ಬಗ್ಗೆ ಅಸೂಯೆ ಪಡುತ್ತಿದ್ದರೆ ನಿಮ್ಮ ಜೀವನದಲ್ಲಿ ಸಫಲತೆ ಸಿಗಲು ಸಾಧ್ಯವಿಲ್ಲ ಎಂದರು.
ಸ್ಪರ್ಧೆ ಮತ್ತು ಸವಾಲುಗಳು ಜೀವನದಲ್ಲಿ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತವೆ, ಆದರೆ ಸ್ಪರ್ಧೆಯು ಆರೋಗ್ಯಕರವಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೆಲವು ಪೋಷಕರು ತಮ್ಮ ಮಗುವಿನ ‘ರಿಪೋರ್ಟ್ ಕಾರ್ಡ್’ ಅನ್ನು ತಮ್ಮ ‘ವಿಸಿಟಿಂಗ್ ಕಾರ್ಡ್’ ಎಂದು ಪರಿಗಣಿಸುತ್ತಾರೆ, ಇದು ಸರಿಯಲ್ಲ ಎಂದು ಪ್ರಧಾನಿ ಹೇಳಿದರು.
ಯಾವುದೇ ಮಗುವನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಬೇಡಿ, ಅದು ಅವನ/ಆಕೆಯ ಭವಿಷ್ಯಕ್ಕೆ ಹಾನಿಕಾರಕವಾಗಿದೆ ಎಂದು ಪೋಷಕರಿಗೆ ಹೇಳಿದರು.ಶಿಕ್ಷಕರು ಮಕ್ಕಳೊಂದಿಗೆ ಬೆರೆಯಬೇಕು, ತರಗತಿಯಲ್ಲಿ ನೀವು ಆರಾಮದಾಯಕ ವಾತಾವರಣವನ್ನು ಸೃಷ್ಟಿಸಬೇಕು ಇದರಿಂದ ಮಕ್ಕಳು ನಿಮ್ಮ ಬಗ್ಗೆ ಆಸಕ್ತಿ ವಹಿಸುತ್ತಾರೆ ಎಂದು ಕಿವಿಮಾತು ಹೇಳಿದರು.