ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿ ಸಾವ್ರರ್ತಿಕ ಚುನಾವಣೆ ಹಾಗೂ ನಾನಾ ಕಾರಣದಿಂದ ತೆರವಾದ ನಗರಸಭೆ, ಗ್ರಾಪಂ ಸದಸ್ಯ ಸ್ಥಾನಗಳಿಗೆ ನಡೆದ ಉಪಚುನಾವಣೆ ಶಾಂತಿಯುತವಾಗಿ ಪೂರ್ಣಗೊಂಡಿದೆ.
ಜಿಲ್ಲೆಯ ಅಮೀನಗಡ, ಕಮತಗಿ, ರನ್ನಬೆಳಗಲಿ ಪಟ್ಟಣ ಪಂಚಾಯಿತಿ, ಜಮಖಂಡಿ ನಗರಸಭೆ ೪೯ ಹಾಗೂ ಜಿಲ್ಲೆಯ ೧೦ ಗ್ರಾಪಂಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಸ್ಥಳೀಯ ಸಂಸ್ಥೆಗಳ 49 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಅಮೀನಗಡ (ಶೇ.೭೦.೦೨), ಕಮತಗಿ (ಶೇ.೭೬.೫೮), ರನ್ನಬೆಳಗಲಿ (ಶೇ.೭೯.೮೭), ಜಮಖಂಡಿ ನಗರಸಭೆಯ ವಾರ್ಡ್-೯ (ಶೇ.೫೬.೯೪) ಸೇರಿ ಒಟ್ಟಾರೆ ಶೇ.೭೪.೩೭ರಷ್ಟು ಮತದಾನವಾಗಿದೆ.
ಉಪ ಚುನಾವಣೆ ನಡೆದ ಗ್ರಾಪಂನ ಖಾಜಿಬೀಳಗಿ (ಶೇ.೬೯.೮೫), ಕಿತ್ತಲಿ (ಶೇ೮೨.೯೫.), ಅನಗವಾಡಿ (ಶೇ.೬೫.೭೩), ಕಾತರಕಿ (ಶೇ.೭೦.೧೩), ಗುಡೂರ ಎಸ್‌ಸಿ (ಶೇ.೭೨.೧೫), ಕೆಸರಕೊಪ್ಪ (ಶೇ.೮೩.೪೦), ನಾವಲಗಿ (ಶೇ.೮೨.೮೦), ಮಾರಾಪುರ (ಶೇ.೮೦.೪೫), ಸೂಳೇಭಾವಿ (ಶೇ.೭೩.೮೨), ನಾಗರಾಳ (ಶೇ.೮೩.೧೬) ಸೇರಿ ಒಟ್ಟು ಶೇ.೬೮.೨೫ರಷ್ಟು ಮತದಾನವಾಗಿದೆ.
ಬೆಳಗ್ಗೆ ೭ ರಿಂದ ಸಂಜೆ ೫ ರವರೆಗೆ ನಡೆದ ಮತದಾನದಲ್ಲಿ ಮತದಾರರು ಉತ್ಸುಕತೆಯಿಂದ ಮತದಾನ ಮಾಡಿದರು. ಮೂರು ಪಪಂ ಹಾಗೂ ಜಮಖಂಡಿ ನಗರಸಭೆಗೆ ನಡೆದ ಮತದಾನದಲ್ಲಿ ಬೆಳಗ್ಗೆ ೯ರ ವರೆಗೆ ಶೇ.೧೦.೮೯, ೧೧ ಗಂಟೆವರೆಗೆ ಶೇ.೨೯.೬೦, ಮಧ್ಯಾಹ್ನ ೧ಕ್ಕೆ ಶೇ.೪೮.೧೪, ೩ ಗಂಟೆವರೆಗೆ ಶೇ.೬೦.೮೭ ಹಾಗೂ ಅಂತಿಮವಾಗಿ ಸಂಜೆ ೫ಕ್ಕೆ ಶೇ.೭೪.೩೭ ಮತದಾನವಾಗುವ ಮೂಲಕ ಅಂತ್ಯಗೊಂಡಿತು.
ಮಾಹಿತಿ ನೀಡದ ಜಿಲ್ಲಾಡಳಿತ
ಜಿಲ್ಲೆಯಲ್ಲಿ ಈ ಬಾರಿ ನಡೆದ ಪಪಂ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲಾಡಳಿತ ಸರಿಯಾಗಿ ಯಾವುದೇ ಮಾಹಿತಿ ನೀಡಲಿಲ್ಲ. ಚುನಾವಣೆ ಅಸೂಚನೆ ಹಾಗೂ ಮತದಾನದ ದಿನದಂದು ಮಾಹಿತಿ ಹಂಚಿಕೊಂಡಿತು. ಚುನಾವಣೆ ಆಯೋಗ ಹೊರಡಿಸಿದ ಕೆಲ ಆದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದೆ ಮಾಹಿತಿ ದೊರೆತಂತಾಗಿತ್ತು.
ಹೀಗಾಗಿ ಜಿಲ್ಲೆಯ ಮೂರು ಪಪಂಗಳಲ್ಲಿ ಕಳೆದ ಬಾರಿಯ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕ್ರಿಯೆ ನಡೆಯಿತು ಎಂಬ ಮಾತು ಪ್ರಜ್ಞಾವಂತ ಮತದಾರರಿಂದ ಕೇಳಿ ಬಂದಿತು.