ವಿಶ್ವದಾದ್ಯಂತ ಇರುವ ಗಂಭೀರ ಬಿಕ್ಕಟ್ಟುಗಳ ನಡುವೆ ಭಾರತದ ಆರ್ಥಿಕತೆಯು ಅತಿ ವೇಗವಾಗಿ ಬೆಳೆಯುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಸ ವ್ಯಕ್ತಪಡಿಸಿದರು.
ಹಿಂದೆ ಐದು ದುರ್ಬಲ ಆರ್ಥಿಕತೆಗಳ ಸಾಲಿಗೆ ಸೇರಿದ್ದ ಭಾರತ ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು.
ಮಹಿಳಾ ಮೀಸಲಾತಿ ಕಾನೂನು ಜಾರಿಗೆ ತಂದ ಸಂಸದರನ್ನು ಅಭಿನಂದಿಸಿ, ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಅತ್ಯಧಿಕ ಪದಕಗಳು, ಚಂದ್ರಯಾನ-3 ರ ಯಶಸ್ಸು ಮತ್ತು ರಾಮಮಂದಿರ ನಿರ್ಮಾಣದ ಕನಸು ನನಸಾಗಿರುವುದನ್ನು ಅವರು ಪ್ರಸ್ತಾಪಿಸಿದರು. ರಾಷ್ಟ್ರಪತಿ ರಾಮ ಮಂದಿರದ ಬಗ್ಗೆ ಪ್ರಸ್ತಾಪಿಸಿದ ಕೂಡಲೇ ಅಲ್ಲಿದ್ದ ಸಂಸದರು ಮೇಜು ಬಡಿದು ಅಭಿನಂದಿಸಿದರು.
ಶತಮಾನಗಳಿಂದಲೂ ರಾಮಮಂದಿರದ ಆಶಯವಿದ್ದು, ಈ ವರ್ಷ ಈಡೇರಿದೆ ಎಂದರು. ಗುಲಾಮಗಿರಿಯ ಯುಗದಲ್ಲಿ ಮಾಡಿದ ಕಾನೂನುಗಳು ಈಗ ಇತಿಹಾಸದ ಭಾಗವಾಗಿದ್ದು, ತ್ರಿವಳಿ ತಲಾಖ್ ಎಂಬ ಅನಿಷ್ಟ ಪದ್ಧತಿಯನ್ನು ಕೊನೆಗೊಳಿಸಲು ಸರ್ಕಾರ ಕಟ್ಟುನಿಟ್ಟಾದ ಕಾನೂನು ನಿಬಂಧನೆ ಮಾಡಿದೆ. ಸಂಸತ್ತಿನ ಅಧಿವೇಶನ ಜನವರಿ 31 ರಿಂದ ಫೆಬ್ರವರಿ 9 ರವರೆಗೆ ನಡೆಯಲಿದೆ. ಇದರಲ್ಲಿ 8 ಸಭೆಗಳು ನಡೆಯಲಿವೆ.
ನಮ್ಮ ಸರ್ಕಾರ ಒಂದು ದೇಶ-ಒಂದು ತೆರಿಗೆ ಕಾನೂನನ್ನು ತಂದಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಬಲಗೊಂಡಿದೆ. ಬ್ಯಾಂಕ್‌ಗಳ ಎನ್‌ಪಿಎ ಶೇ.4ಕ್ಕೆ ಇಳಿಕೆಯಾಗಿದೆ. ಮೊದಲಿಗಿಂತ ಎಫ್‌ಡಿಐ ದುಪ್ಪಟ್ಟಾಗಿದೆ. ಉತ್ತಮ ಆಡಳಿತ ಮತ್ತು ಪಾರದರ್ಶಕತೆಯಿಂದಾಗಿ ಆರ್ಥಿಕ ಸುಧಾರಣೆಯಾಗಿದೆ. ಮೇಕ್ ಇನ್ ಇಂಡಿಯಾ ದೊಡ್ಡ ಅಭಿಯಾನವಾಗಿದೆ. ರಕ್ಷಣಾ ಕ್ಷೇತ್ರಗಳಲ್ಲಿ ಖಾಸಗಿ ಕಂಪನಿಗಳ ಭಾಗವಹಿಸುವಿಕೆ ಹೆಚ್ಚಾಗಿದೆ. ಇಂದು ನಾವು ಆಟಿಕೆಗಳನ್ನು ರಫ್ತು ಮಾಡುತ್ತೇವೆ ಎಂದರು.
ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.ದೇಶದಲ್ಲಿ 10 ಕೋಟಿಗೂ ಹೆಚ್ಚು ಜನ ಶಾಶ್ವತ ಮನೆಗಳನ್ನು ಪಡೆದಿದ್ದು, 11 ಕೋಟಿ ಗ್ರಾಮಸ್ಥರಿಗೆ ಪೈಪ್‌ಲೈನ್ ನೀರು ತಲುಪಿದೆ. ಕೊರೊನಾ ಅವಧಿಯಿಂದ 80 ಕೋಟಿ ದೇಶವಾಸಿಗಳಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಈಗ ಅದನ್ನು ಮುಂದಿನ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಇದಕ್ಕೆ 11 ಸಾವಿರ ಕೋಟಿ ರೂಪಾಯಿ ಹೆಚ್ಚು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.