ದೆಹಲಿ: ದೇಶಾದ್ಯಂತ ರೈತ ಸಹೋದರ ಸಹೋದರಿಯರ ಕಲ್ಯಾಣಕ್ಕೆ ಸಂಬಂಧಿಸಿದ ಪ್ರತಿಯೊಂದು ಬೇಡಿಕೆಯನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅಭಯ ನೀಡಿದರು.
ರೈತರ ಪ್ರತಿಭಟನೆ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಪ್ರತಿಕ್ರಿಯೆ ಬಂದಿದೆ. ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದು, ಕಬ್ಬು ಖರೀದಿಯ ಬೆಲೆಯಲ್ಲಿ ಹೆಚ್ಚಿನ ಏರಿಕೆ ಮಾಡಲು ಅನುಮೋದನೆ ನೀಡಲಾಗಿದೆ. ಈ ಕ್ರಮದಿಂದ ನಮ್ಮ ಕೋಟ್ಯಂತರ ಕಬ್ಬು ಉತ್ಪಾದಕ ರೈತರಿಗೆ ಅನುಕೂಲವಾಗಲಿದೆ.
2024-25 (ಅಕ್ಟೋಬರ್-ಸೆಪ್ಟೆಂಬರ್) ಸಕ್ಕರೆ ಹಂಗಾಮಿಗೆ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರತಿ ಕ್ವಿಂಟಲ್‌ಗೆ 315 ರೂಪಾಯಿದಿಂದ 340 ರೂ.ಗೆ ಏರಿಕೆ ಮಾಡಿದೆ. ಇದರೊಂದಿಗೆ ಕಬ್ಬಿನ ಎಫ್ಆರ್ಪಿ ಪ್ರತಿ ಕ್ವಿಂಟಲ್‌ಗೆ 25 ರೂ. ಹೆಚ್ಚಿಸಿದಂತಾಗಿದೆ. ಈ ಬಗ್ಗೆ ಕೇಂದ್ರ ಪ್ರಸಾರ ಮತ್ತು ಕ್ರೀಡಾ ಖಾತೆ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ FRP ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಬ್ಬನ್ನು ಮುಖ್ಯವಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ.