ದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಏಕಾಂಗಿಯಾಗಿ 370 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಮಧ್ಯಪ್ರದೇಶದಲ್ಲಿ 7550 ಕೋಟಿ ರೂ ಬಹು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದರು. ತನಗೆ ಮತ್ತು ತಮ್ಮ ಪಕ್ಷಕ್ಕೆ ಬುಡಕಟ್ಟು ಸಮುದಾಯ ಮತ ಬ್ಯಾಂಕ್ ಅಲ್ಲ ಅದು ದೇಶದ ಹೆಮ್ಮೆ, ಈ ಬಾರಿ ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2024 ರ ಚುನಾವಣೆಗೆ ಮುನ್ನ ರಾಜ್ಯಕ್ಕೆ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದು. ನಾನು ಮಧ್ಯಪ್ರದೇಶಕ್ಕೆ ಚುನಾವಣಾ ಪ್ರಚಾರಕ್ಕಾಗಿ ಬಂದಿಲ್ಲ, ಆದರೆ ಜನರ ಸೇವೆಗಾಗಿ ಬಂದಿದ್ದೇನೆ ಎಂದು ಹೇಳಿದರು.
ಮಧ್ಯಪ್ರದೇಶವು ಬುಡಕಟ್ಟು ಜನಾಂಗದವರಿಗೆ ಮೀಸಲಾದ ಆರು ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವುದರಿಂದ ರಾಜ್ಯದಲ್ಲಿ ಪ್ರಧಾನಿ ಮೋದಿಯವರ ಪ್ರಚಾರವು ಮಹತ್ವ ಪಡೆದಿದ್ದು, ಕಳೆದ ಬಾರಿ, ನವೆಂಬರ್ 17, 2023 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ ನಂತರ ಅವರು ಡಿಸೆಂಬರ್ 13 ರಂದು ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಧ್ಯಪ್ರದೇಶಕ್ಕೆ ಹೋಗಿದ್ದರು ಎಂದು ಮಾಹಿತಿ ಬೆಳಕಿಗೆ ಬಂದಿದೆ.